ಶುಲ್ಕ ರಹಿತ ವಿವಿ ಪರೀಕ್ಷೆಗೆ ಕ್ಯಾಂಪಸ್ ಫ್ರಂಟ್ ಒತ್ತಾಯ

ಮಂಗಳೂರು, ಜೂ.12: ಕೋವಿಡ್ ಪರಿಣಾಮ ಲಾಕ್‌ಡೌನ್‌ನಿಂದಾಗಿ ಪೋಷಕರು ಆರ್ಥಿವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಶುಲ್ಕ ರಹಿತವಾಗಿ ನಡೆಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಂಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಮುಫೀದ ರಹ್ಮಾನ್, ಕೋವಿಡ್‌ನಂತಹ ಈ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಶುಲ್ಕವನ್ನು ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಉದ್ಯೋಗ, ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿರುವ ಮಧ್ಯಮ ಹಾಗೂ ಬಡ ವರ್ಗದ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಕಟ್ಟಲು ಸಾಲದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಶುಲ್ಕ ರಹಿತ ಪರೀಕ್ಷೆ ನಡೆಸುವ ಮೂಲಕ ಸರಕಾರ ಬೆಂಬಲ ನೀಬೇಕು ಎಂದು ಅವರು ಹೇಳಿದರು.
5ನೆ ತರಗತಿವರೆಗಿನ ಆನ್‌ಲೈನ್ ಶಿಕ್ಷಣ ರದ್ದುಗೊಳಿಸಿರುವುದು ಸ್ವಾಗತಾರ್ಹ ಎಂದ ಅವರು, ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ, ಪರೀಕ್ಷೆಗಳಿಂದ ಅವರು ವಂಚಿತರಾಗುತ್ತಾರೆ. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯೂ ಮಾನಸಿಕವಾಗಿ ತೊಂದರೆಗೆ ಕಾರಣವಾಗಲಿದೆ. ಆದ್ದರಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಸರಕಾರ ಆನ್‌ಲೈನ್ ಶಿಕ್ಷಣ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಲಾಕ್‌ಡೌನ್ ಸಂದರ್ಭ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ ಶುಲ್ಕ ಪಾವತಿಸಲು ಒತ್ತಾಯಿಸುತಿದೆ. ಈಗಾಗಲೇ ಕೆಲ ಸಂಸ್ಥೆಗಳು ಶುಲ್ಕ ಪಾವತಿ, ಸಮವಸ್ತ್ರ ಪಡೆಯುವಂತೆ ಪೋಷಕರಿಗೆ ಸಂದೇಶ ರವಾನಿಸಿವೆ. ಖಾಸಗಿ ಸಂಸ್ಥೆಗಳ ಈ ನಡೆಯನ್ನು ಸಂಘಟನೆ ಖಂಡಿಸುವುದಾಗಿ ಮುಫೀದ ಹೇಳಿದರು.
ಸಂಘಟನೆಯ ಬೇಡಿಕೆ ಹಾಗೂ ಒತ್ತಾಯದ ಕುರಿತಂತೆ ಸಂಬಂಧಪಟ್ಟ ಸಚಿವರು ಹಾಗೂ ವಿಶ್ವವಿದ್ಯಾನಿಲಯಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್, ರಾಜ್ಯ ಸಮಿತಿ ಸದಸ್ಯ ಅನೀಸ್ ಪುತ್ತೂರು, ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಉಪಸ್ಥಿತರಿದ್ದರು.







