ಉಡುಪಿ: ತಗ್ಗಿದ ಮಳೆಯ ಪ್ರಮಾಣ
ಉಡುಪಿ, ಜೂ.12: ಜಿಲ್ಲೆಯಾದ್ಯಂತ ಬುಧವಾರ-ಗುರುವಾರ ಬಿದ್ದ ಭಾರೀ ಮಳೆಯ ಪ್ರಮಾಣ ನಿನ್ನೆ ಗಣನೀಯವಾಗಿ ಕಡಿಮೆಯಾಗಿದೆ. ಗುರುವಾರ ಬೆಳಗ್ಗೆ 8:30ರಿಂದ ಶುಕ್ರವಾರ ಬೆಳಗ್ಗೆ 8:30ರವರೆಗೆ 24 ಗಂಟೆಗಳ ಅವಧಿ ಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿದ್ದ ಮಳೆಯ ಪ್ರಮಾಣ 23ಮೀ.ಮೀ. ಆಗಿದೆ. ನಿನ್ನೆ ಜಿಲ್ಲೆಯಲ್ಲಿ 93.6ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 24ಮಿ.ಮೀ., ಕುಂದಾಪುರದಲ್ಲಿ 21, ಕಾರ್ಕಳದಲ್ಲಿ 18, ಬೈಂದೂರಿನಲ್ಲಿ 38, ಬ್ರಹ್ಮಾವರದಲ್ಲಿ 16, ಕಾಪು 17 ಹಾಗೂ ಹೆಬ್ರಿಯಲ್ಲಿ 28ಮಿ.ಮೀ. ಮಳೆಯಾಗಿತ್ತು. ಈ ದಿನದ ಸಮಾನ್ಯ ಮಳೆ 36 ಮಿ.ಮಿ. ಆಗಿದೆ.
ಮಳೆ-ಗಾಳಿಯಿಂದ ಜಿಲ್ಲೆಯ ಅಲ್ಲಲ್ಲಿ ಅಲ್ಪಪ್ರಮಾಣದ ಹಾನಿ ಸಂಭವಿಸಿದೆ. ಕಾಪು ತಾಲೂಕಿನ ಮೂಡಬೆಟ್ಟು ಗ್ರಾಮದ ಶ್ರೀಧರ ಆಚಾರ್ಯರ ಮನೆ ಮೇಲೆ ಮರಬಿದ್ದು ಐದು ಸಾವಿರ ರೂ., ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಮಹಾಬಲ ನಾಯ್ಕ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಮಳೆಯಿಂದ ಹತ್ತು ಸಾವಿರ ರೂ.ಗಳ ಹಾನಿ ಸಂಭವಿಸಿದ್ದರೆ ಅದೇ ಗ್ರಾಮದ ದೇವೇಂದ್ರ ನಾಯಕ್ ಎಂಬವರ ಮನೆಗೆ 15 ಸಾವಿರ ರೂ.ಗಳ ಹಾನಿ ಸಂಭವಿಸಿದೆ ಎಂದು ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಕಚೇರಿಯ ವರದಿ ತಿಳಿಸಿದೆ.





