ಕರ್ನಾಟಕ ಸಹಿತ 7 ರಾಜ್ಯಗಳಿಂದ ಒಟ್ಟು 63 ಶ್ರಮಿಕ್ ರೈಲುಗಳಿಗೆ ಬೇಡಿಕೆ

ಹೊಸದಿಲ್ಲಿ, ಜೂ.12: ಒಟ್ಟು 63 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವಂತೆ ಏಳು ರಾಜ್ಯಗಳು, ಬೇಡಿಕೆ ಸಲ್ಲಿಸಿವೆಯೆಂದು ರೈಲ್ವೆ ಇಲಾಖೆ ಶುಕ್ರವಾರ ತಿಳಿಸಿದೆ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು, ವಿಶೇಷ ರೈಲುಗಳು ಬೇಕಾದಲ್ಲಿ ಅದಕ್ಕಾಗಿ ಬೇಡಿಕೆ ಸಲ್ಲಿಸಬೇಕೆಂದು ರೈಲ್ವೆ ಮಂಡಳಿಯ ಅಧ್ಯಕ್ಷರು, ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.
ಹೀಗೆ ಓಡಲಿರುವ 63 ರೈಲುಗಳ ಪೈಕಿ 32, ಕೇರಳದಿಂದ ನಿರ್ಗಮಿಸಲಿವೆ. ಅವುಗಳಲ್ಲಿ 23 ರೈಲುಗಳು ಪಶ್ಚಿಮಬಂಗಾಳಕ್ಕೆ ಪ್ರಯಾಣಿಸಲಿವೆಯೆಂದು ರೈಲ್ವೆ ಇಲಾಖೆ ತಿಳಿಸಿದೆ.
ಕೇರಳದ ಹೊರತಾಗಿ ತಮಿಳುನಾಡು 10 ಶ್ರಮಿಕ್ ವಿಶೇಷ ರೈಲುಗಳಿಗೆ ಬೇಡಿಕೆ ಸಲ್ಲಿಸಿವೆ. ಹಾಗೆಯೇ ಜಮ್ಮು ಕಾಶ್ಮೀರ (9), ಕರ್ನಾಟಕ (6), ಆಂಧ್ರಪ್ರದೇಶ (3), ಪಶ್ಚಿಮಬಂಗಾಳ (2) ಹಾಗೂ ಗುಜರಾತ್ (1) ರೈಲುಗಳಿಗೆ ಬೇಡಿಕೆಯಿಟ್ಟಿವೆ.
ಆದಾಗ್ಯೂ, ಉತ್ತರಪ್ರದೇಶ ಸರಕಾರವು ತನಗೆ ರೈಲುಗಳ ಆವಶ್ಯಕತೆಯ ಬಗ್ಗೆ ಇನ್ನೂ ರೈಲ್ವೆ ಇಲಾಖೆಗೆ ಮಾಹಿತಿಯನ್ನು ನೀಡಿಲ್ಲವೆಂದು ತಿಳಿದುಬಂದಿದೆ.
ರೈಲ್ವೆ ಮಂಡಳಿಯ ಅಧ್ಯಕ್ಷರು ಮೇ 29,ಜೂನ್ 3 ಹಾಗೂ ಜೂನ್ 9ರಂದು ಈ ವಿಷಯವಾಗಿ ವಿವಿಧ ರಾಜ್ಯಗಳಿಗೆ ಪತ್ರಬರೆದು, ಬೇಡಿಕೆ ಸಲ್ಲಿಸಿದ 24 ತಾಸುಗಳೊಳಗಾಗಿ, ಬಯಸಿದಷ್ಟು ಸಂಖ್ಯೆಯಲ್ಲಿ ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದರು.







