ಘನ ತ್ಯಾಜ್ಯ ನಿರ್ವಹಣಾ ತೆರಿಗೆ ಹೆಚ್ಚಳಕ್ಕೆ ವಿರೋಧ ಪಕ್ಷ ಆಕ್ಷೇಪ: ಮಾತಿನ ಚಕಮಕಿ
ಬಿಬಿಎಂಪಿ ಕೌನ್ಸಿಲ್ ಸಭೆ

ಬೆಂಗಳೂರು, ಜೂ.12: ಘನ ತ್ಯಾಜ್ಯ ನಿರ್ವಹಣೆಗೆ ತೆರಿಗೆ ಹೆಚ್ಚಳ ಮಾಡಿರುವ ಕ್ರಮಕ್ಕೆ ಬಿಬಿಎಂಪಿ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು ಮಾತಿನ ಚಕಮಕಿ ನಡೆಸಿದರು.
ಶುಕ್ರವಾರ ಬಿಬಿಎಂಪಿ ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ವಿಷಯ ಪ್ರಸ್ತಾಪಿಸಿ ಘನ ತ್ಯಾಜ್ಯ ನಿರ್ವಹಣೆ ತೆರಿಗೆ ವಿಧಿಸಿ ಸಾರ್ವಜನಿಕರ ಮೇಲೆ ಮತ್ತಷ್ಟು ಹೊರೆ ಹಾಕುವುದೇಕೆ, ತ್ಯಾಜ್ಯ ತೆರಿಗೆ ವಿಧಿಸುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿ ಇದೇನು ಗಬ್ಬರ್ ಸಿಂಗ್ ತೆರಿಗೆಯೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಕೂಡಾ ಆಕ್ಷೇಪಿಸಿ ಈಗಾಗಲೇ ತ್ಯಾಜ್ಯಕ್ಕೆ ಉಪಕರವನ್ನು ವಿಧಿಸಲಾಗುತ್ತಿದೆ. ಈಗ ಪ್ರತಿ ಮನೆಗೆ ತ್ಯಾಜ್ಯ ನಿರ್ವಹಣೆ ತೆರಿಗೆ ವಿಧಿಸಲು ಹೊರಟಿದೆ. ಇದರಿಂದ ಪ್ರತಿ ಮನೆಗೆ ಈಗ ನೀಡುತ್ತಿರುವ ತೆರಿಗೆ ಜೊತೆಗೆ ಮತ್ತೆ 200 ರೂ. ಕಸ ನಿರ್ವಹಣೆ ತೆರಿಗೆ ವಸೂಲಿಗೆ ಮುಂದಾಗಿದೆ. ಇದು ಗಬ್ಬರ್ ಸಿಂಗ್ ಟ್ಯಾಕ್ಸ್ ಅಲ್ಲದೆ ಮತ್ತೇನು ಎಂದು ಕೇಳಿದರು. ಇದರಿಂದ ಆಡಳಿತ ಪಕ್ಷದ ಸದಸ್ಯರು ಕೆರಳಿದರು.
ಕಾಂಗ್ರೆಸ್ ಸರಕಾರ ಇದ್ದಾಗ ಇದನ್ನು ಜಾರಿಗೆ ತಂದಿದೆ. ಅದನ್ನು ಬಿಜೆಪಿ ಸರಕಾರ ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು. ಇದನ್ನು ಒಪ್ಪದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ನಾವು ಜನರ ಪರವಾಗಿ ಮಾತನಾಡುತ್ತಿದ್ದೇವೆ. ಹೆಚ್ಚುವರಿ ತೆರಿಗೆ ವಿಧಿಸುವುದು ಬೇಡ ಎಂದರು. ಈ ವೇಳೆ ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ ಮಾತನಾಡಿ, ಈಗ ಚರ್ಚೆ ಅನಗತ್ಯ. ಕೌನ್ಸಿಲ್‍ನಲ್ಲಿ ಚರ್ಚೆ ಮಾಡಿ ಸರಕಾರಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಅಲ್ಲಿಯವರೆಗೆ ಇದು ಅನುಷ್ಠಾನಕ್ಕೆ ಬರುವುದಿಲ್ಲ ಎಂದರು. ಆದರೂ ಪ್ರತಿಪಕ್ಷ ಸದಸ್ಯರು ಸಮಾಧಾನವಾಗಲಿಲ್ಲ. ಈ ವೇಳೆ ಎರಡೂ ಕಡೆಯ ಸದಸ್ಯರ ನಡುವೆ ಕೆಲ ನಿಮಿಷ ಮಾತಿನ ಚಕಮಕಿ ನಡೆಯಿತು.
ಡಿ.ಜೆ ಹಳ್ಳಿಯಲ್ಲಿ ಕೊರೋನ ಸೋಂಕಿತರು ಇಲ್ಲವೇ ಇಲ್ಲ
ದೇವರಜೀವನಹಳ್ಳಿ (ಡಿಜೆ ಹಳ್ಳಿ) ವಾರ್ಡ್‍ನಲ್ಲಿ ಕೊರೋನ ಸೋಂಕು ಪ್ರಕರಣ ಇಲ್ಲವೇ ಇಲ್ಲ. ಆದರೂ ಪದೇ ಪದೇ ವಾರ್ಡ್‍ನ ಹೆಸರು ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ವಾರ್ಡ್‍ನ ಸದಸ್ಯರೂ ಆಗಿರುವ ಮಾಜಿ ಮೇಯರ್ ಸಂಪತ್‍ರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ಡಿಜೆ ಹಳ್ಳಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವುದರಿಂದ ಇಲ್ಲಿನ ಜನ ಕೆಲಸಕ್ಕೂ ಹೋಗದಂತಾಗಿದೆ. ಕೂಲಿ ಕಾರ್ಮಿಕರಿಗೆ ಕೆಲಸ ಸಿಗದಂತಾಗಿದೆ. ಬೇರೆ ವಾರ್ಡ್‍ನಲ್ಲಿ ಆಗಿರುವ ಪ್ರಕರಣಗಳನ್ನು ತಮ್ಮ ವಾರ್ಡ್‍ಗೆ ತಳಕು ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಬೊಕ್ಕಸಕ್ಕೆ ಬಾರದ 370 ಕೋಟಿ ರೂ.
ಪಾಲಿಕೆ ಬೊಕ್ಕಸಕ್ಕೆ ಹೆಚ್ಚು ಆದಾಯ ಬರುವ ಉದ್ದೇಶದಿಂದ ಜಾರಿಗೆ ತಂದ ಟೋಟಲ್ ಸ್ಟೇಷನ್ ಸರ್ವೆಯಿಂದ ಹೆಚ್ಚುವರಿ ಹಣ ಸಂಗ್ರಹವೇ ಆಗಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಪದ್ಮನಾಭರೆಡ್ಡಿ ಆರೋಪಿಸಿದರು.
ಸಾಮಾನ್ಯ ಸಭೆಯಲ್ಲಿ ಈ ವಿಚಾರ ಮಂಡಿಸಿದ ಅವರು, ನಗರದಲ್ಲಿ ಅನೇಕ ಕಡೆ ತೆರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ಉದ್ದೇಶದಿಂದ ಬೃಹತ್ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ಮಾಡಲಾಯಿತು. ಇದರಿಂದಾಗ 370 ಕೋಟಿ ರೂ. ಹೆಚ್ಚುವರಿ ಆದಾಯ ಪಾಲಿಕೆ ಬೊಕ್ಕಸಕ್ಕೆ ಬರಬೇಕಾಗಿತ್ತು. ಆದರೆ, ಅಧಿಕಾರಿಗಳು ವರದಿ ನೀಡಿದರೆ ಹೊರತು 370 ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ಮುಂದಾಗಲಿಲ್ಲ. ಇನ್ನೆರಡು ತಿಂಗಳಲ್ಲಿ ನಮ್ಮ ಅಧಿಕಾರ ಮುಗಿಯಲಿದೆ. ಮುಂದೆ ವರದಿ ಏನಾಯಿತು ಎಂದು ಯಾರನ್ನು ಕೇಳಬೇಕು ಎಂದು ಪ್ರಶ್ನೆ ಮಾಡಿದರು.
ಟೋಟಲ್ ಸ್ಟೇಷನ್ ಸರ್ವೆಯಲ್ಲಿ ಕೆಲವು ಕಟ್ಟಡಗಳಿಗೆ ವಿನಾಯ್ತಿ ನೀಡಲಾಗಿದೆ. ಇದರಲ್ಲೂ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ. ಇಂತಹವರಿಗೆ ಶಿಕ್ಷೆಯಾಗಬೇಕು. ಅವರನ್ನು ಕರೆಸಿ ಉತ್ತರ ಕೊಡಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಮೇಯರ್ ಗೌತಮ್ ಕುಮಾರ್ ಪ್ರತಿಕ್ರಿಯಿಸಿ, ಟೋಟಲ್ ಸ್ಟೇಷನ್ ಸರ್ವೆ ಮಾಡಿರುವ ಅಧಿಕಾರಿಗಳನ್ನು ಕರೆಸಿ ಉತ್ತರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.







