ಉಡುಪಿ: ಒಂದೇ ಕುಟುಂಬದಲ್ಲಿ ಮೂರನೇ ಕೊರೋನ ಪಾಸಿಟಿವ್ ಪ್ರಕರಣ ಪತ್ತೆ
ಇಂದು 22 ಪಾಸಿಟಿವ್ ಪ್ರಕರಣ, ಒಟ್ಟು ಸೋಂಕಿತರ ಸಂಖ್ಯೆ 990

ಉಡುಪಿ, ಜೂ.12: ಜಿಲ್ಲೆಯಲ್ಲಿ ನಿನ್ನೆಯಂತೆ ಇಂದು ಸಹ ನೋವೆಲ್ ಕೊರೋನ ವೈರಸ್ (ಕೋವಿಡ್-19)ನ 22 ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಈಗ 990ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿ ಒಟ್ಟು 990 ಪಾಸಿಟಿವ್ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಇಂದು ಸೋಂಕಿತರ ಪಟ್ಟಿಯಲ್ಲಿರುವ 22 ಮಂದಿಯಲ್ಲಿ 21 ಮಂದಿ ಮುಂಬೈ-ಮಹಾರಾಷ್ಟ್ರದಿಂದ ಬಂದವರಾದರೆ ಒಬ್ಬರು ಸ್ಥಳೀಯರು. ಕಳೆದ ಜೂ.7ರಂದು ಸೋಂಕು ಪತ್ತೆಯಾದ ಮಣಿಪುರದ 30ರ ಹರೆಯದ ಲ್ಯಾಬ್ ಟೆಕ್ನಿಷಿಯನ್‌ರ ನಿಕಟ ಸಂಬಂಧಿ 71ರ ಹರೆಯದ ವೃದ್ಧರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಜೂ.8ರಂದು ಈ ಮಹಿಳೆಯ ಐದು ವರ್ಷ ಪ್ರಾಯದ ಮಗನಲ್ಲೂ ಸೋಂಕು ಪತ್ತೆಯಾಗಿತ್ತು. ಇಂದಿನ ಪ್ರಕರಣದೊಂದಿಗೆ ಈ ಕುಟುಂಬದಲ್ಲಿ ಮೂರನೇಯವರಿಗೆ ಇದೀಗ ಸೋಂಕು ಹರಡಿದಂತಾಗಿದೆ.
ಶುಕ್ರವಾರ ಸೋಂಕು ಪತ್ತೆಯಾದವರಲ್ಲಿ 14 ಪುರುಷರು ಹಾಗೂ 8 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 10 ವರ್ಷದೊಳಗಿನ ಪ್ರಾಯದ ಒಬ್ಬ ಬಾಲಕ ಹಾಗೂ ಇಬ್ಬರು ಬಾಲಕಿಯರಿದ್ದಾರೆ. ಕುಂದಾಪುರ ತಾಲೂಕಿನ 20 ಮಂದಿಯಲ್ಲಿ ಹಾಗೂ ಉಡುಪಿ ತಾಲೂಕಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಡಾ.ಸೂಡ ತಿಳಿಸಿದರು.
31 ಮಂದಿ ಬಿಡುಗಡೆ: ವಿವಿಧ ಆಸ್ಪತ್ರೆಗಳಿಂದ ಇಂದು 31 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಕುಂದಾಪುರದ ಕೋವಿಡ್ ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ 28 ಆಗಿದೆ. ಈ ಮೂಲಕ ಜಿಲ್ಲೆಯ 990 ಪಾಸಿಟಿವ್ ಬಂದವರಲ್ಲಿ 581 ಮಂದಿ ಈಗಾಗಲೇ ಬಿಡುಗಡೆಯಾಗಿದ್ದಾರೆ. 408 ಮಂದಿ ಇನ್ನೂ ಆಸ್ಪತ್ರೆಗಳಲ್ಲಿ (ಸಕ್ರಿಯ ಪ್ರಕರಣ) ಚಿಕಿತ್ಸೆ ಪಡೆಯುತಿ ದ್ದಾರೆ. ಮೇ 14ರಂದು ಮುಂಬೈಯಿಂದ ಬಂದ 54 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ವೀಡಿಯೋ ಸಂದೇಶದಲ್ಲಿ ನೀಡಿದ ಜಿಲ್ಲೆಯ ಇತ್ತೀಚಿನ ಕೋವಿಡ್-19ರ ಅಂಕಿ ಅಂಶದಂತೆ ಶುಕ್ರವಾರ ಅಪರಾಹ್ನ ದವರೆಗೆ ಒಟ್ಟು 658 ಮಂದಿ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆ ಯಾಗಿದ್ದು, ನೆಗೆಟಿವ್ ವರದಿ ಬಂದಿರುವ ಇನ್ನೂ 50 ಮಂದಿ ಬಿಡುಗಡೆಗಾಗಿ ಕಾಯುತಿದ್ದಾರೆ. ಈ ಮೂಲಕ ಶನಿವಾರ ಬೆಳಗ್ಗೆಯೊಳಗೆ ಒಟ್ಟು 708 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದು ಆಗ ಕೇವಲ 282 ಸಕ್ರಿಯ ಪ್ರರಣಗಳು ಜಿಲ್ಲೆಯಲ್ಲಿರುತ್ತದೆ.
26 ಸ್ಯಾಂಪಲ್ ನೆಗೆಟಿವ್: ಶುಕ್ರವಾರ 22 ಪಾಸಿಟಿವ್ ಪ್ರಕರಣ ಗಳೊಂದಿಗೆ 26 ಸ್ಯಾಂಪಲ್‌ಗಳ ವರದಿ ನೆಗೆಟಿವ್ ಆಗಿ ಬಂದಿವೆ. ಇಂದು ಕೋವಿಡ್-19ರ ಗುಣಲಕ್ಷಣವಿರುವ 72 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಇಬ್ಬರು ಕೋವಿಡ್ ಸಂಪರ್ಕಿತರಾದರೆ, 24 ಮಂದಿ ಶೀತಜ್ವರದಿಂದ ಬಳಲುವ ವರು. ಉಳಿದ 46 ಮಂದಿ ಕೋವಿಡ್ ಹಾಟ್ ಸ್ಪಾಟ್‌ಗಳಿಂದ ಬಂದವರ ಮಾದರಿಗಳನ್ನು ಸಹ ಪರೀಕ್ಷೆಗೆ ಕಳುಹಿಲಾಗಿದೆ ಎಂದು ಡಾ.ಸೂಡ ತಿಳಿಸಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳು 12,767 ಇವುಗಳಲ್ಲಿ ಇಂದು ಸಂಜೆಯವರೆಗೆ ಒಟ್ಟು 11,705 ನೆಗೆಟಿವ್ ಆಗಿ ಬಂದರೆ, 990 ಸ್ಯಾಂಪಲ್ ಪಾಸಿಟಿವ್ ಬಂದಿವೆ. ಇನ್ನು ಬಾಕಿ ಉಳಿದ ಒಟ್ಟು 72 ಸ್ಯಾಂಪಲ್‌ಗಳ ವರದಿಯನಿರೀಕ್ಷೆಯಲ್ಲಿದ್ದೇವೆ ಎಂದವರು ಹೇಳಿದರು.
ಐಸೋಲೇಷನ್ ವಾರ್ಡಿಗೆ 14 ಮಂದಿ: ಇಂದು ರೋಗದ ಗುಣ ಲಕ್ಷಣದೊಂದಿಗೆ 9 ಮಂದಿ ಪುರುಷರು ಹಾಗೂ ಐವರು ಮಹಿಳೆಯರು ಸೇರಿ ಒಟ್ಟು 14 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಕೊರೋನ ಶಂಕಿತರು ಮೂವರು, ಉಸಿರಾಟದ ತೊಂದರೆ ಯವರು 9 ಮಂದಿ ಹಾಗೂ ಶೀತಜ್ವರದಿಂದ ಬಾಧಿತರಾದ ಇಬ್ಬರು ಸೇರಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 12 ಮಂದಿ ಬಿಡುಗಡೆಗೊಂಡಿದ್ದು, 80 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 56 ಮಂದಿ ಶುಕ್ರವಾರ ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5391 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4750 ಮಂದಿ 28 ದಿನಗಳ ನಿಗಾವಣೆ ಹಾಗೂ 4852 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.
ಜಿಲ್ಲೆಯಲ್ಲಿ ಈಗಲೂ 456 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 18 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.







