ದ.ಕ.: ಮತ್ತೆ 17 ಮಂದಿಗೆ ಕೊರೋನ ದೃಢ
ಸೋಂಕಿತರ ಸಂಖ್ಯೆ 241ಕ್ಕೇರಿಕೆ

ಮಂಗಳೂರು, ಜೂ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 17 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 241ಕ್ಕೆ ಏರಿದೆ. ಈ ನಡುವೆ ನಾಲ್ವರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
17 ಸೋಂಕಿತರ ಪೈಕಿ 14 ಮಂದಿ ಸೌದಿ ಅರೇಬಿಯ, ಇಬ್ಬರು ಮುಂಬೈ ಹಾಗೂ ಬೆಂಗಳೂರಿನಿಂದ ಬಂದಿದ್ದ ಓರ್ವನಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಸೌದಿ ಅರೇಬಿಯದಿಂದ ಜೂ.5ರಂದು ಆಗಮಿಸಿದ್ದ 12 ಮಂದಿ, ಜೂ.8, 10ರಂದು ಬಂದ ಇಬ್ಬರನ್ನು ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜೂ.8ರಂದು ಮುಂಬೈನಿಂದ ಬಂದಿದ್ದ 38 ವರ್ಷದ ಮಹಿಳೆ ಹಾಗೂ ಜೂ.9ರಂದು ಆಗಮಿಸಿದ್ದ 52 ವರ್ಷದ ವ್ಯಕ್ತಿ ಸೇರಿದಂತೆ ಜೂ.7ರಂದು ಬೆಂಗಳೂರಿನಿಂದ ಬಂದಿದ್ದ 70 ವರ್ಷದ ವೃದ್ಧನನ್ನು ನಗರದಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರೆಲ್ಲರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಡಿಸ್ಚಾರ್ಜ್: ಕೊರೋನ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಶುಕ್ರವಾರ ಮತ್ತೆ ನಾಲ್ವರು (40, 52 ವರ್ಷದ ಪುರುಷರು, 42, 59 ವರ್ಷದ ಮಹಿಳೆಯರು) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇದುವರೆಗೆ 129 ಮಂದಿ ಗುಣಮುಖರಾದಂತಾಗಿದೆ. ಸದ್ಯ 105 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





