ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ಸರಕಾರ ಹಠಕ್ಕೆ ಬಿದ್ದರೆ ಹೋರಾಟ ಅನಿವಾರ್ಯ- ಸಿದ್ದರಾಮಯ್ಯ ಎಚ್ಚರಿಕೆ
"ರೈತರು ಆರ್ಥಿಕ ಚೈತನ್ಯ ಕಳೆದುಕೊಳ್ಳುವಂತೆ ಮಾಡುವ ಹುನ್ನಾರ"

ಬೆಂಗಳೂರು, ಜೂ. 12: ನ್ಯಾಯಾಲಯದ ನೆಪದಲ್ಲಿ 'ಭೂ ಸುಧಾರಣೆ ತಿದ್ದುಪಡಿ ಕಾಯ್ದೆ' ಸೇರಿದಂತೆ ಜನವಿರೋಧಿ ಕಾಯ್ದೆಗಳ ಅನುಷ್ಠಾನ ಮಾಡುವ ಹಠಕ್ಕೆ ಬಿದ್ದರೆ ರಾಜ್ಯ ಸರಕಾರದ ವಿರುದ್ಧ ಚಳವಳಿ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಕರ್ನಾಟಕ ಭೂ ಸುಧಾಕರಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ತೀರ್ಮಾನವನ್ನು ವಿರೋಧಿಸಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಕೃಷಿಕರ ಬದುಕನ್ನು ನಾಶ ಮಾಡಲು ಹೊರಟಿರುವ ರಾಜ್ಯ ಸರಕಾರ 'ಉಳುವವನಿಗೆ ಭೂಮಿ' ಎಂಬ ತತ್ವಕ್ಕೆ ಬದಲಾಗಿ 'ಉಳ್ಳವನಿಗೆ ಭೂಮಿ' ಎಂಬ ತತ್ವ ಜಾರಿಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯ ಸರಕಾರ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಬಂಡವಾಳಿಗರಲ್ಲಿರುವ ಅಪಾರ ಪ್ರಮಾಣದ ಹಣದಿಂದ ಸಣ್ಣಪುಟ್ಟ ರೈತರ ಭೂಮಿಯನ್ನು ಕಸಿದುಕೊಳ್ಳಲು ಅವಕಾಶವಾಗಲಿದ್ದು, ಕೃಷಿಯಲ್ಲಿನ ವೈವಿಧ್ಯತೆ ನಾಶ ಮಾಡಿ ಮೊನೋಕಲ್ಚರ್ ಕೃಷಿ ಸ್ಥಾಪಿಸಲಾಗುತ್ತದೆ. ಕೃಷಿಯಲ್ಲಿ ಬಂಡವಾಳಿಗರ ಏಕಸ್ವಾಮ್ಯ ಸಾಧಿಸಲಾಗುತ್ತದೆ. ಜನರು ಸೇರಿ ಉತ್ಪಾದಿಸುವ ಬದಲು ಕೇವಲು ಉತ್ಪಾದನೆ ಮಾಡಿ ದೇಶಕ್ಕೆ ಹಂಚುವ ಅಪಾಯಕಾರಿ ದಿನಗಳು ಬರಲಿವೆ. ಅಲ್ಲದೆ, ಆಹಾರದ ಹಕ್ಕು ಮೊಟಕುಗೊಳ್ಳಲಿದೆ ಎಂದು ಎಚ್ಚರಿಸಿದರು.
ಕೃಷಿಯ ಕೈಗಾರಿಕಾಕರಣದಿಂದ ಅಂತರ್ಜಲ ವಿಪರೀತ ಶೋಷಣೆಗೊಳಪಡಲಿದ್ದು, ಹೆಚ್ಚಿನ ಪ್ರಮಾಣದ ರಸಗೊಬ್ಬರ, ಔಷಧಗಳಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳಲಿದೆ. ಕೃಷಿ ಭೂಮಿ ತನ್ನ ಉತ್ಪಾದಕ ಶಕ್ತಿಯನ್ನು ಕಳೆದುಕೊಳ್ಳಲಿದೆ ಎಂದ ಅವರು, ಭಾರತದ ಆಹಾರ ಸ್ವಾವಲಂಬನೆ ಸಂಪೂರ್ಣ ನಾಶವಾಗುತ್ತದೆ ಎಂದು ಅವರು ಹೇಳಿದರು.
ಭೂ ಸುಧಾರಣಾ ಕಾಯ್ದೆ ಜಾರಿಯಲ್ಲಿದ್ದಾಗಲೂ ಕೈಗಾರಿಕಾ ವಲಯದಲ್ಲಿ ರಾಜ್ಯ ಮುಂಚೂಣಿಯಲ್ಲಿತ್ತು. ಇಡೀ ವಿಶ್ವದ ಬಂಡವಾಳಿಗರು ರಾಜ್ಯದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರು. ಕೃಷಿ ಮತ್ತು ಕೈಗಾರಿಕೆಗಳ ಸಮತೋಲಿತ ಬೆಳವಣಿಗೆಯಿಂದ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಇಡೀ ದೇಶದಲ್ಲೆ ಅತ್ಯಂತ ಕಡಿಮೆ ಇತ್ತು. ಇಂತಹ ಸುಭದ್ರ ವ್ಯವಸ್ಥೆಯನ್ನು ಸರಕಾರ ನಾಶ ಮಾಡಲು ಹೊರಟಿದೆ. ಗ್ರಾಮೀಣ ಆರ್ಥಿಕತೆ ಸಂಪೂರ್ಣ ನಾಶ ಮಾಡಿ ನಗರಗಳಲ್ಲಿ ಬಿಡಿಗಾಸಿಗೆ ದುಡಿಯುವ ಕಾರ್ಮಿಕ ವರ್ಗವನ್ನು ಸೃಷ್ಟಿಸುವ ಹುನ್ನಾರ ಇದರ ಹಿಂದಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲು ಹೊರಟ ಸರಕಾರ ಹಣ ಇದ್ದವರು, ಯಾರು ಎಷ್ಟು ಬೇಕಾದರೂ ಭೂಮಿ ಪಡೆದು ಅದನ್ನು ಕೃಷಿ ಉದ್ದೇಶಕ್ಕಾಗಿ ಬಳಸಬೇಕೆಂಬ ನಿಯಮವನ್ನು ವಿಧಿಸುವುದರ ಕುರಿತು ಮಾಹಿತಿ ಇಲ್ಲ. ಗ್ರಾಮೀಣ ಆರ್ಥಿಕತೆ ಸಂಪೂರ್ಣ ಕೊಂದು ಹಾಕಿ ಕೃಷಿ ವಲಯವನ್ನು ನಾಶ ಮಾಡಿ ಇಡೀ ದೇಶದ ಆರ್ಥಿಕತೆಯನ್ನು ಆಲ್ಲೋಲ-ಕಲ್ಲೋಲ ಮಾಡಲು ಸರಕಾರ ಮುಂದಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ದಮನಿತ ವರ್ಗಗಳ ಆರ್ಥಿಕ ಚೈತನ್ಯ ಕಳೆದುಕೊಂಡರೆ, ಭೂ ಒಡೆತನದ ಮೇಲಿನ ಅಧಿಕಾರದಿಂದ ವಂಚಿತರಾದರೆ ಶಾಶ್ವತವಾಗಿ ಗುಲಾಮಗಿರಿಯತ್ತ ಸಾಗುತ್ತದೆ. ಹಾಗೇಯೇ ಕೇಂದ್ರ, ರಾಜ್ಯ ಸರಕಾರಗಳು ಹಿಂದೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಈಗ ರೈತರು ತಮ್ಮ ಆರ್ಥಿಕ ಚೈತನ್ಯವನ್ನು ಕಳೆದುಕೊಳ್ಳುವಂತೆ ಮಾಡುವ ಹುನ್ನಾರದ ಪ್ರಯತ್ನಗಳಾಗಿವೆ ಎಂದು ದೂರಿದರು.
ಉಳುವವರಿಗೆ ಭೂಮಿ ಎಂಬುದು ನಮ್ಮ ಸ್ವಾತಂತ್ರ್ಯ ಹೋರಾಟದ ಆಶಯವಾಗಿತ್ತು. ಹೀಗಾಗಿ ಸ್ವಾತಂತ್ರ್ಯ ನಂತರ 1961ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಿತ್ತು. ಆದುದರಿಂದ ಯಾವುದೇ ಕಾರಣಕ್ಕೂ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು. ಒಂದು ವೇಳೆ ಸರಕಾರ ಹಠಕ್ಕೆ ಬಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಖಗೆ, ಸಿಎಂ ಇಬ್ರಾಹೀಂ, ಡಾ.ಎಚ್.ಸಿ.ಮಹದೇವಪ್ಪ, ಸಲೀಂ ಅಹ್ಮದ್, ಕೆ.ಆರ್.ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಜಯಚಂದ್ರ, ಝಮೀರ್ ಅಹ್ಮದ್ ಖಾನ್, ವಿ.ಎಸ್.ಉಗ್ರಪ್ಪ, ನಾಸೀರ್ ಹುಸೇನ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ತಿದ್ದುಪಡಿ ಅಲ್ಲ ರದ್ಧತಿ
ಒಬ್ಬರಿಗೆ ಒಂದು ಕೆಲಸ ಎಂಬ ಸಾಮಾಜಿಕ ನ್ಯಾಯ ಇದರ ಹಿಂದೆ ಇದೆ. ವ್ಯಾಪಾರಿ, ಅಧಿಕಾರಿ, ಕೈಗಾರಿಕೋದ್ಯಮಿ ಮುಂತಾದವರಿಗೆ ಬದುಕುವುದಕ್ಕೆ ದಾರಿಗಳಿವೆ, ಹಾಗಾಗಿ ಅವರು ಕೃಷಿ ಭೂಮಿ ಹೊಂದಬಾರದು ಎಂಬ ಉದ್ದೇಶ ಇದರ ಹಿಂದೆ ಇದೆ. 79 ಎ, ಬಿ, ಸಿ ಮತ್ತು 80 ಹಾಗೂ 63 ನ್ನು ತೆಗೆದು ಹಾಕಿದರೆ ಅದು ಕಾಯ್ದೆಯ ತಿದ್ದುಪಡಿ ಅಲ್ಲ ಬದಲಾಗಿ ಕಾಯ್ದೆಯ ರದ್ಧತಿ ಎಂಬುವುದೂ ಸಹ ಇಂದಿನ ಸಭೆಯಲ್ಲಿ ಚರ್ಚಿತಗೊಂಡ ಅಂಶಗಳು.







