ಕುಂದಾಪುರ ಎಜುಕೇಶನ್ ಸೊಸೈಟಿಯ ವಿದ್ಯಾಸಂಸ್ಥೆಗಳಲ್ಲಿ 70ಲಕ್ಷ ರೂ. ಶುಲ್ಕ ರಿಯಾಯಿತಿ
ಉಡುಪಿ, ಜೂ.12: ಕೊರೋನ ಲಾಕ್‌ಡೌನ್‌ನಿಂದಾಗಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ತಮ್ಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕದಲ್ಲಿ ಸುಮಾರು 70 ಲಕ್ಷ ರೂ.ನಷ್ಟು ರಿಯಾಯಿತಿ ನೀಡಲು ನಿರ್ಧರಿಸಿದ್ದಾರೆ.
ಕುಂದಾಪುರ ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆ, ಎಚ್.ಎಂ.ಎಂ.ಆಂಗ್ಲ ಮಾಧ್ಯಮ ಶಾಲೆ, ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು ಹಾಗೂ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಥಮಿಕದಿಂದ ಪದವಿವರೆಗೆ ಸುಮಾರು 5000 ಮಕ್ಕಳು ಕಲಿಯುತ್ತಿದ್ದಾರೆ.
ಕಳೆದ ವರ್ಷದ ಒಂದೂವರೆ ಕೋಟಿ ಶುಲ್ಕ ಮಕ್ಕಳಿಂದ ಬರಲು ಬಾಕಿಯಿದೆ. ಆದರೆ ನಾವು ಪೋಷಕರಿಗೆ ಶುಲ್ಕ ನೀಡುವಂತೆ ಒತ್ತಡ ಹಾಕಿಲ್ಲ. ಈ ಬಾರಿ ಶುಲ್ಕದಲ್ಲಿ ಸುಮಾರು 70 ಲಕ್ಷ ರೂ. ರಿಯಾಯಿತಿ ನೀಡುತ್ತಿದ್ದೇವೆ. ಇದರಲ್ಲಿ ಸಮಾಜದ ಕಟ್ಟಕಡೆಯ ಕುಟುಂಬದ ಮಕ್ಕಳಿಗೆ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅರ್ಧ ಫೀಸ್ ತೆಗೆದು ಕೊಳ್ಳಲಾಗುವುದು. ಆದರೆ ಆರ್ಥಿಕ ಸದೃಢವಾಗಿರುವ ಕುಟುಂಬದ ಮಕ್ಕಳು ಶಿಕ್ಷಣ ಶುಲ್ಕವನ್ನು ಪೂರ್ತಿಯಾಗಿ ನೀಡಬೇಕು ಎಂದು ಸೊಸೈಟಿ ಅಧ್ಯಕ್ಷರಾಗಿ ರುವ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.







