ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಹೈಕೋರ್ಟ್

ಬೆಂಗಳೂರು, ಜೂ.12: ಕೊರೋನ ವೈರಸ್ ಭೀತಿಯನ್ನು ಸಾರ್ವಜನಿಕ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಕೈಗಾರಿಕೆಗಳ ಕಾಯ್ದೆಯ ಅನ್ವಯ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಹೇಳಿದೆ.
ಸರಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಕೆಲಸದ ಅವಧಿ ಹೆಚ್ಚಿಸಿದ ಅಧಿಸೂಚನೆಗೆ ತಡೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ದೀಪಾಂಜಲಿ ನಗರದ ನಿವಾಸಿ ಎಚ್.ಮಾರುತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಕೊರೋನ ಹಾಗೂ ಲಾಕ್‍ಡೌನ್ ಪರಿಸ್ಥಿತಿಯನ್ನು ಕಲಂ 5ರಡಿ ಸಾರ್ವಜನಿಕ ಪರಿಸ್ಥಿತಿ ಎಂದು ಪರಿಗಣಿಸಿರುವುದನ್ನು ಸಮ್ಮತಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯ ಪರಿಣಾಮ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿ 9 ತಾಸುಗಳಿಂದ 10 ತಾಸು ಹಾಗೂ ಒಂದು ವಾರದ ಕೆಲಸದ ಅವಧಿ 48 ತಾಸುಗಳಿಂದ 60 ತಾಸುಗಳಿಗೆ ಹೆಚ್ಚಿಸಲಾಗಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.





