ನಿಮ್ಮ ಬಂಕರ್‌ಗೆ ಹಿಂದಿರುಗಿ: ಡೊನಾಲ್ಡ್ ಟ್ರಂಪ್‌ಗೆ ಸಿಯಾಟಲ್ ಮೇಯರ್ ತಿರುಗೇಟು

ಸಿಯಾಟಲ್ (ಅಮೆರಿಕ), ಜೂ. 12: ಅಮೆರಿಕದ ಪಶ್ಚಿಮದ ನಗರ ಸಿಯಾಟಲ್‌ನಲ್ಲಿ ಪ್ರತಿಭಟನಕಾರರು ನಿರ್ಮಿಸಿರುವ ‘ಪೊಲೀಸ್-ಮುಕ್ತ ಸ್ವಾಯತ್ತ ವಲಯ’ದ ವಿಷಯದಲ್ಲಿ ಮಧ್ಯಪ್ರವೇಶಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬಳಿಕ, ಟ್ರಂಪ್ ಮತ್ತು ಸಿಯಾಟಲ್ ಮೇಯರ್ ಜೆನ್ನಿ ಡರ್ಕನ್ ನಡುವಿನ ಜಗಳ ಉಲ್ಬಣಿಸಿದೆ. ‘‘ನೀವು ನಿಮ್ಮ ಭೂಗತ ಬಂಕರ್‌ಗೆ ಹಿಂದಿರುಗಿ’’ ಎಂದು ಮೇಯರ್ ಅಮೆರಿಕ ಅಧ್ಯಕ್ಷರಿಗೆ ಹೇಳಿದ್ದಾರೆ.
ಇತ್ತೀಚೆಗೆ ಪೊಲೀಸ್ ಬಂಧನದ ವೇಳೆ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಮೃತಪಟ್ಟ ಬಳಿಕ, ಜನಾಂಗೀಯ ತಾರತಮ್ಯ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರು ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿ ಶ್ವೇತಭವನದ ಹೊರಗೆಯೂ ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಗುಪ್ತದಳದ ಸಿಬ್ಬಂದಿ ಡೊನಾಲ್ಡ್ ಟ್ರಂಪ್‌ರನ್ನು ಭದ್ರತೆಯ ದೃಷ್ಟಿಯಿಂದ ಶ್ವೇತಭವನದ ಭೂಗತ ಬಂಕರ್‌ಗೆ ಕರೆದೊಯ್ದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸಿಯಾಟಲ್ ಮೇಯರ್ ಇವೇ ವರದಿಗಳನ್ನು ಉಲ್ಲೇಖಿಸಿ ‘ಬಂಕರ್’ ಎಂದು ಹೇಳಿದ್ದಾರೆ.
ಸಿಯಾಟಲ್ ನಗರದಲ್ಲಿ ‘ಕ್ಯಾಪಿಟಲ್ ಹಿಲ್ ಸ್ವಾಯತ್ತ ವಲಯ’ ಎಂದು ಬಣ್ಣಿಸಲಾದ ವಲಯವೊಂದನ್ನು ಸ್ಥಾಪಿಸಲು ಪ್ರದರ್ಶನಕಾರರು ಮತ್ತು ನಗರದ ಪೊಲೀಸ್ ಇಲಾಖೆಯ ನಡುವೆ ಒಮ್ಮತ ಏರ್ಪಟ್ಟಿತ್ತು. ಇದನ್ನು ರದ್ದುಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.
‘‘ನಿಮ್ಮ ನಗರವನ್ನು ನೀವು ವಾಪಸ್ ಪಡೆದುಕೊಳ್ಳಿ. ನಿಮ್ಮಿಂದಾಗದಿದ್ದರೆ, ನಾನು ಮಾಡುತ್ತೇನೆ’’ ಎಂಬುದಾಗಿ ಸಿಯಾಟಲ್ ಮೇಯರ್ ಜೆನ್ನಿ ಡರ್ಕನ್ ಮತ್ತು ವಾಶಿಂಗ್ಟನ್ ರಾಜ್ಯದ ಗವರ್ನರ್ ಜೇ ಇನ್‌ಸ್ಲೀ ಅವರಿಗೆ ಟ್ರಂಪ್ ಗುರುವಾರ ಮಾಡಿದ ಟ್ವೀಟ್‌ಗಳಲ್ಲಿ ಎಚ್ಚರಿಕೆ ನೀಡಿದ್ದರು. ಅವರಿಬ್ಬರೂ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಅದೂ ಅಲ್ಲದೆ, ಪ್ರತಿಭಟನಕಾರರನ್ನು ಟ್ರಂಪ್, ‘ಸಿಯಾಟಲನ್ನು ವಶಪಡಿಸಿಕೊಂಡ ಭಯೋತ್ಪಾದಕರು’ ಎಂಬುದಾಗಿ ಬಣ್ಣಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೇಯರ್ ಜೆನ್ನಿ ಡರ್ಕನ್, ‘‘ನಮ್ಮೆಲ್ಲರನ್ನೂ ಸುರಕ್ಷಿತರನ್ನಾಗಿ ಮಾಡಿ. ನೀವು ನಿಮ್ಮ ಬಂಕರ್‌ಗೆ ಹಿಂದಿರುಗಿ’’ ಎಂದು ತಿರುಗೇಟು ನೀಡಿದ್ದಾರೆ.







