ಕಾರ್ಮಿಕರ ಕೆಲಸ ಅವಧಿ ಹೆಚ್ಚಳವಿಲ್ಲ: 8 ಗಂಟೆಗಳ ಅವಧಿಯನ್ನೇ ಮುಂದುವರಿಸಲು ರಾಜ್ಯ ಸರಕಾರ ತೀರ್ಮಾನ
ಸ್ಪಷ್ಟನೆ ನೀಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಬೆಂಗಳೂರು, ಜೂ. 12: ಕೈಗಾರಿಕೆಗಳಲ್ಲಿ ಕಾರ್ಮಿಕರ ಕೆಲಸ ಮೊದಲಿನಂತೆ ಎಂಟು ಗಂಟೆಗಳ ಅವಧಿಯನ್ನೆ ಮುಂದುವರಿಸಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ಮಾಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ್ದು, ಮೊದಲಿನಂತೆ ಮುಂದುವರಿಸಲು ಅವರು ಸೂಚನೆ ನೀಡಿದ್ದಾರೆ ಎಂದರು.
ಹೀಗಾಗಿ ಹಲವು ದಿನಗಳಿಂದ ಕಾರ್ಮಿಕರ ಮನಸ್ಸಿನಲ್ಲಿ ಉದ್ಭವಿಸಿದ್ದ ದುಗುಡ, ಸಂದೇಹ, ಮತ್ತು ಗೊಂದಲ ಎಲ್ಲವೂ ನಿವಾರವಣೆಯಾದಂತೆ ಆಗಿದ್ದು, ಇಂದಿನಿಂದಲೇ ಕಾರ್ಮಿಕರ ಕೆಲಸ ಅವಧಿ 10ಗಂಟೆಯಿಂದ 8 ಗಂಟೆಗಳಿಗೆ ಸೀಮಿತಗೊಳಿಸಲು ಸರಕಾರ ಕ್ರಮ ವಹಿಸಿದೆ ಎಂದು ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದರು.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಕಾರ್ಮಿಕ ಇಲಾಖೆ ರಾಜ್ಯದಲ್ಲಿ ವಾರಕ್ಕೆ 40 ಗಂಟೆ ಇದ್ದ ಕಾರ್ಮಿಕರ ದುಡಿಯುವ ಅವಧಿಯನ್ನು 60 ಗಂಟೆಗಳಿಗೆ ಏರಿಸಿತ್ತು. ಕೆಲವು ರಾಜ್ಯಗಳು ದಿನಕ್ಕೆ ಎಂಟು ಗಂಟೆ ಇದ್ದ ದುಡಿಮೆ ಅವಧಿ 12 ಗಂಟೆಗೆ ಏರಿಸಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ 10ಗಂಟೆಗೆ ಹೆಚ್ಚಿಸಿತ್ತು.
ಆದರೆ, ಇದರಿಂದ ಕಾರ್ಮಿಕರ ಮತ್ತು ಶ್ರಮಿಕರ ಶಕ್ತಿಗೆ ತೊಂದರೆಯಾಗುತ್ತದೆ. ಸರಕಾರ ತನ್ನ ನಿರ್ಣಯವನ್ನು ಪುನರ್ ವಿಮರ್ಶೆ ಮಾಡಬೇಕೆಂದು ವಿವಿಧ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೆ, ಇಲಾಖೆ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‍ನಲ್ಲಿಯೂ ದೂರು ದಾಖಲಿಸಿದ್ದಾರೆ. ಈ ಮಧ್ಯೆ ಸರಕಾರವೇ ಸ್ವಯಂ ಪ್ರೇರಿತವಾಗಿ ನ್ಯಾಯಾಲಯದಿಂದ ಪ್ರಕರಣ ಹಿಂಪಡೆದಿದೆ. ಹೀಗಾಗಿ ಹಿಂದಿನ ಅವಧಿಯನ್ನೆ ಮುಂದುವರಿಸಲಾಗುವುದು ಎಂದು ಹೇಳಿದರು.







