ಬೆಳಗಾವಿ: ಗಂಟಲು ದ್ರವದ ಪರೀಕ್ಷೆ ನಿರಾಕರಿಸಿ ಕ್ವಾರಂಟೈನ್ ನಲ್ಲಿದ್ದವರಿಂದ ಕೊರೋನ ಯೋಧರ ಮೇಲೆ ಹಲ್ಲೆ

ಸಾಂದರ್ಭಿಕ ಚಿತ್ರ
ಬೆಳಗಾವಿ, ಜೂ.12: ಬೆಳಗಾವಿ ತಾಲೂಕಿನ ಮರಣಹೋಳ ಗ್ರಾಮದ ಸರಕಾರಿ ಶಾಲೆಯಲ್ಲಿ ಮಹಾರಾಷ್ಟ್ರದಿಂದ ವಾಪಸಾದ ಮಕ್ಕಳು, ಮಹಿಳೆ ಸೇರಿ 22 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಇವರಲ್ಲಿ ಕೆಲವರು ಗಂಟಲು ದ್ರವದ ಪರೀಕ್ಷೆಗೆ ನಿರಾಕರಿಸಿ, ಕೊರೋನ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಮಗೆ ಯಾವುದೇ ಜ್ವರ ಬಂದಿಲ್ಲ. ನಾವು ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊರೋನ ಯೋಧರು ಹಾಗೂ ಕ್ವಾರಂಟೈನ್ನಲ್ಲಿ ಇರುವವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೊರೋನ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ ಎಂದು ದೂರಲಾಗಿದೆ.
ಬೆಳಗಾವಿಯ ತಹಶೀಲ್ದಾರ್ ಅವರು ಬೆಳಗ್ಗೆ ಕ್ವಾರಂಟೈನ್ಗೆ ಭೇಟಿ ನೀಡಿ, ಕ್ವಾರಂಟೈನ್ನಲ್ಲಿ ಇರುವವರೆಲ್ಲರ ಗಂಟಲು ದ್ರವದ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿ ಹೋಗಿದ್ದರು. ಮಧ್ಯಾಹ್ನ ಬಂದಿದ್ದ ಕೊರೋನ ಯೋಧರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಆಶಾ ಕಾರ್ಯಕರ್ತೆಯರು ಗಂಟಲು ದ್ರವ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಸಿದ್ಧತೆಗೆ ವಿರೋಧಿಸಿದ ಕೊರೋನ ಶಂಕಿತರು, ಗಲಾಟೆ ನಡೆಸಿ ಪರೀಕ್ಷೆಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.
"ಕೊರೋನ ಸೋಂಕು ನಿಯಂತ್ರಣಕ್ಕಾಗಿ ನಾವು ಕೊರೋನ ಶಂಕಿತರ ಪರೀಕ್ಷೆ ನಡೆಸಲು ಮುಂದಾಗಿದ್ದೆವು. ಆದರೆ, ಅವರು ನಮಗೆ ಸಹಕಾರ ನೀಡಲಿಲ್ಲ. ಗಲಾಟೆ ಮಾಡಿದರು. ಹಲ್ಲೆ ನಡೆಸಿ, ನನ್ನ ಹಾಗೂ ಗ್ರಾಮ ಲೆಕ್ಕಾಧಿಕಾರಿಯ ಶರ್ಟ್ ಅನ್ನು ಹರಿದರು. ಕೊರೋನ ಯೋಧರ ಮೇಲೆ ಹಲ್ಲೆ ನಡೆಸಿದರು. ಹೀಗಾಗಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಕತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಿದ್ದೇವೆ" ಎಂದು ಪಿಡಿಒ ಪ್ರಶಾಂತ ತಿಳಿಸಿದರು.







