ಪತಿಯ ಕೊಲೆಗೆ ಸುಫಾರಿ ನೀಡಿದ ಪತ್ನಿ: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು, ಜೂ.12: ನಗದು, ಚಿನ್ನಾಭರಣ ತೆಗೆದುಕೊಂಡು ಹೋಗಿ ಎರಡನೆ ಪತ್ನಿಯ ಮನೆಯಲ್ಲಿ ನೆಲೆಸಿದ್ದ ಪತಿಯನ್ನೇ ಮೊದಲನೆ ಪತ್ನಿ ಅಪಹರಿಸಿ ಕೊಲೆಗೆ ಸುಫಾರಿ ನೀಡಿದ್ದ ಆರೋಪ ಕೇಳಿಬಂದಿದ್ದು, ಈ ಸಂಬಂಧ ನಾಲ್ವರನ್ನು ಇಲ್ಲಿನ ಬಾಗಲುಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೆಸರುಘಟ್ಟದ ಅಭಿಷೇಕ್(26), ಬಾಗಲುಗುಂಟೆ ನಿವಾಸಿ ಭರತ್(25), ಜೆ.ಪಿ.ನಗರದ ಪ್ರಕಾಶ್(22), ಬ್ಯಾಡರಹಳ್ಳಿಯ ಚೆಲುವಮೂರ್ತಿ(22) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಜೂ.8 ರಂದು ಸಿಡೇದಹಳ್ಳಿಯ ವಿಶ್ವೇಶ್ವರ ಲೇಔಟ್‍ನ ಶಾಹೀದ್ ಶೇಕ್(31) ಎಂಬಾತನನ್ನು ಆರೋಪಿಗಳು ಅಪಹರಿಸಿ ಹಾಸನ ಜಿಲ್ಲೆ ಸರಾಪುರ ಗ್ರಾಮದ ತೋಟದ ಮನೆಯಲ್ಲಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಬಂಧಿತರಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ವೇಳೆ ಆರೋಪಿಗಳು ಶಾಹಿದ್ ಶೇಖ್‍ನ ಮೊದಲ ಪತ್ನಿ ರೋಮಾ ಶೇಕ್‍ನಿಂದ ಸುಫಾರಿ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಶಾಹೀದ್ ಶೇಕ್, ಮೊದಲು ರೋಮಾ ಶೇಖ್ ಎಂಬಾಕೆಯನ್ನು ವಿವಾಹವಾಗಿ, ಆಕೆಯ ಬಳಿಯಿಂದ ಹಣ, ಒಡವೆಗಳನ್ನು ತೆಗೆದುಕೊಂಡು ಬಂದು 2ನೆ ಪತ್ನಿ ರತ್ನಾ ಖಾತೂನ್ ಎಂಬಾಕೆಯೊಂದಿಗೆ ನೆಲೆಸಿದ್ದ. ಇದರಿಂದ ಆಕ್ರೋಶಗೊಂಡ ಮೊದಲ ಪತ್ನಿ ರೋಮಾ ಶೇಕ್ ಆರೋಪಿಗಳಿಗೆ 2 ಲಕ್ಷ ರೂ. ಸುಫಾರಿ ನೀಡಿ ಪತಿಯನ್ನು ಅಪಹರಿಸಿ ಕೊಲೆ ಮಾಡಬೇಕು ಎಂದು ತಿಳಿಸಿದ್ದರು. ಅದರಂತೆ ತಲೆಮರೆಸಿಕೊಂಡಿರುವ ಈ ನಾಲ್ವರು ಆರೋಪಿಗಳು ಕೃತ್ಯವೆಸಗಿದ್ದು, ಈ ಸಂಬಂಧ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಮದು ಅವರು ಹೇಳಿದರು.







