ಹಗಲು ದರೋಡೆ ಮಾಡುತ್ತಿರುವ ಮೋದಿ ಸರಕಾರ: ಕಾಂಗ್ರೆಸ್ ಟೀಕೆ

ಬೆಂಗಳೂರು, ಜೂ.12: ಪೆಟ್ರೋಲ್, ಡಿಸೇಲ್ ದರವನ್ನು ಪದೇ ಪದೇ ಹೆಚ್ಚಿಸುವ ಮೂಲಕ ಜನ ಸಾಮಾನ್ಯರಿಂದ ಅತ್ಯಧಿಕ ತೆರಿಗೆ ವಸೂಲಿ ಮಾಡುತ್ತಿರುವ ನರೇಂದ್ರ ಮೋದಿ ಸರಕಾರವು ಹಗಲು ದರೋಡೆಯಲ್ಲಿ ತೊಡಗಿದೆ. ಕಳೆದ 6 ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯನ್ನು ರೂ.3.31, ಡಿಸೇಲ್ ಬೆಲೆಯನ್ನು ರೂ.3.42 ಏರಿಕೆ ಮಾಡಲಾಗಿದ್ದು ಜನರ ಮೇಲೆ ಬೆಲೆ ಏರಿಕೆ ಬರೆ ಎಳೆದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಪರೀಕ್ಷೆ ನಡೆಸುವ ಸಾಮರ್ಥ್ಯವೂ ಇದೆ. ಆದರೂ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಮುಂದಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಅವಕಾಶ ಕಲ್ಪಿಸಿದಂತಾಗಿದೆ. ಸರಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದಾಗಿ ರಾಜ್ಯ ಕೊರೋನ ಕೂಪಕ್ಕೆ ಜಾರುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್‍ನಲ್ಲಿ ದೂರಿದೆ.
ಭಾರತ ಕೋವಿಡ್ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದ್ದು, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಬೇಕಿದೆ. ಕೇಂದ್ರ, ರಾಜ್ಯ ಸರಕಾರಗಳು ಘೋಷಣೆಗಳ ಮೂಲಕ ಜನರನ್ನು ದಾರಿ ತಪ್ಪಿಸುವುದು ಬಿಟ್ಟು, ಪರಿಣಾಮಕಾರಿ ಕ್ರಮಗಳ ಮೂಲಕ ಸೋಂಕು ನಿಯಂತ್ರಿಸಲು ಮುಂದಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.





