ಊರಿಗೆ ತೆರಳಲು ಕಾತರ: ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರ ಪರದಾಟ
ಬೆಂಗಳೂರು, ಜೂ.12: ಲಾಕ್‍ಡೌನ್ ಪರಿಣಾಮದಿಂದ ದಿನೇ ದಿನೇ ರಾಜ್ಯ ಬಿಟ್ಟು ಹೋಗುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರವೂ ನಗರದ ಅರಮನೆ ಮೈದಾನಕ್ಕೆ ಸಹಸ್ರ ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದರು.
ಒಮ್ಮೆಲೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮತ್ತು ಈಶಾನ್ಯ ರಾಜ್ಯಗಳ ನಿವಾಸಿಗಳು ಆಗಮಿಸಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಪರದಾಡಬೇಕಾಯಿತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಸಮಾಧಾನಪಡಿಸುವ ದೃಶ್ಯ ಸಾಮಾನ್ಯವಾಗಿತ್ತು.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು ಮರಳಿ ಸ್ವಗ್ರಾಮಗಳಿಗೆ ತೆರಳಲು ಸರಕಾರ ಅವಕಾಶ ಕಲ್ಪಿಸಿದೆ. ತವರಿಗೆ ಮರಳುವವರು ಸೇವಾ ಸಿಂಧು ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳಬೇಕು, ನೋಂದಾಯಿಸಿಕೊಂಡರಿಗೆ ಎಸ್‍ಎಂಎಸ್ ರವಾನೆಯಾಗಿತ್ತು. ಈ ಎಎಸ್‍ಎಂಎಸ್ ಸಂದೇಶ ಫಾರ್ವರ್ಡ್ ಆಗಿ ನೋಂದಾವಣಿ ಆಗದೆ ಇದ್ದ ಸಾವಿರಾರು ಮಂದಿ ಅರಮನೆ ಮೈದಾನಕ್ಕೆ ಆಗಮಿಸಿದರು ಎನ್ನಲಾಗಿದೆ.
ನೋಂದಾಯಿಸಿದವರಿಗೆ ಮಾತ್ರ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ ಎಂದರೂ ಕೇಳದ ಹೊರ ರಾಜ್ಯದವರು ತಮಗೂ ತವರಿಗೆ ವಾಪಸ್ ಹೋಗಲು ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ನಿರೀಕ್ಷೆಗೆ ಮೀರಿ ಜನ ಆಗಮಿಸಿದ್ದರಿಂದ ಸುರಕ್ಷಿತ ಅಂತರ ಮಾಯವಾಗಿತ್ತು. ಕುಡಿಯುವ ನೀರು, ಲಘು ಉಪಾಹಾರದ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.
ನೋಂದಾಯಿತ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡಿ ಅವರ ಊರಿಗೆ ಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ, ನೋಂದಾವಣಿಯಾಗದೆ ಇದ್ದವರು ಬಂದಿದ್ದರಿಂದ ಎಲ್ಲವೂ ಅಸ್ತವ್ಯಸ್ತವಾಯಿತು. ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲು, ದಾಖಲಾತಿಗಳನ್ನು ಪರಿಶೀಲನೆ ಮಾಡಲು ಸಿಬ್ಬಂದಿ ಕೊರತೆಯಾಗಿ ಹಿರಿಯ ಅಧಿಕಾರಿಗಳು ಹೈರಾಣಾದರು.
ತಪ್ಪು ಮಾಹಿತಿಯಿಂದಾಗಿ ಮಣಿಪುರ, ಒಡಿಶಾ ರಾಜ್ಯಗಳ ಸಾವಿರಾರು ಮಂದಿ ಜಮಾಯಿಸಿದ್ದರಿಂದ ಈ ಗೊಂದಲ ಉಂಟಾಗಿದೆ. ಒಂದೂವರೆ ಸಾವಿರ ಮಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಂಡು ಸೇವಾಸಿಂಧು ಆ್ಯಪ್ ಮೂಲಕ ಮೊಬೈಲ್‍ಗಳಿಗೆ ಸಂದೇಶ ರವಾನಿಸಲಾಗಿದೆ. ಆ ಸಂದೇಶ ಅವರಲ್ಲೇ ಫಾರ್ವರ್ಡ್ ಆಗಿ ಇಂದು ಪ್ರಯಾಣಕ್ಕೆ ಆಯ್ಕೆ ಆಗದಿದ್ದವರೂ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಭಾರಿ ದಟ್ಟಣೆ ಉಂಟಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದರು.
ಶ್ರಮಿಕ್ ರೈಲು
ವಲಸೆ ಕಾರ್ಮಿಕರನ್ನು ಹೊತ್ತು ಶುಕ್ರವಾರ ಬೆಂಗಳೂರಿನಿಂದ ಎರಡು ವಿಶೇಷ ಶ್ರಮಿಕ್ ರೈಲು ಪ್ರಮಾಣ ಬೆಳೆಸಿದ್ದು, ಪಶ್ವಿಮ ಬಂಗಾಳ ರಾಜ್ಯಕ್ಕೆ 1186 ಮಂದಿ, ಒಡಿಶಾ ರಾಜ್ಯಕ್ಕೆ 1075 ಮಂದಿ ಕಾರ್ಮಿಕರು ಸಾಗಿದ್ದಾರೆ ಎಂದು ರೈಲ್ವೇ ಇಲಾಖೆ ಮೂಲಗಳು ತಿಳಿಸಿವೆ.







