ವರ್ಷ ಕಳೆದರೂ ಸಿಗದ ನೇಮಕಾತಿ ಪತ್ರ: ಅತಂತ್ರ ಸ್ಥಿತಿಯಲ್ಲಿ ಪಿಯು ಉಪನ್ಯಾಸಕರು

ತುಮಕೂರು, ಜೂ.11: ಪಿಯು ಉಪನ್ಯಾಸಕರಾಗಿ ಎಲ್ಲಾ ರೀತಿಯಲ್ಲಿ ಆಯ್ಕೆಗೊಂಡು ದಾಖಲಾತಿಗಳ ಪರಿಶೀಲನೆ ನಡೆದು ಒಂದು ವರ್ಷ ಕಳೆದರೂ, ಅವರಿಗೆ ನೇಮಕಾತಿ ವಿತರಿಸುವಲ್ಲಿ ಶಿಕ್ಷಣ ಇಲಾಖೆ ಇಂದು, ನಾಳೆ ಎಂದು ಮೀನಾಮೇಷ ಎಣಿಸುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚು ಪಿಯು ಶಿಕ್ಷಕರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
2015ರಲ್ಲಿ ಅಂದಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪಿಯು ಶಿಕ್ಷಣ ಮಂಡಳಿ 15-05-2015ರಲ್ಲಿ 1069 ಪಿಯು ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ನಂತರ ಹೈದ್ರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸೇರ್ಪಡೆಗೊಂಡು ಹೆಚ್ಚುವರಿ 134 ಹುದ್ದೆಗಳನ್ನು ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದ್ದು, ಇದು 30-04-2016ಕ್ಕೆ ಮುಕ್ತಾಯಗೊಂಡಿತ್ತು. ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸೇರಿದಂತೆ ಹಲವು ರೀತಿಯ ಅಡೆ ತಡೆಗಳು ಹಾಗೂ ಲೋಪದೋಷಗಳನ್ನು ಸರಿಪಡಿಸಿಕೊಂಡು 05-12-2018ರಂದು ಆರ್ಹತಾ ಪರೀಕ್ಷೆ ನಡೆಸಿ, ಅದರಲ್ಲಿ ಫಲಿತಾಂಶಗಳನ್ನು ಆಧರಿಸಿ, ಆರ್ಹರನ್ನು ಗುರುತಿಸಿ, 19-02-2019ರಿಂದ ಅವರುಗಳ ದಾಖಲಾತಿ ಪರಿಶೀಲನೆ ನಡೆದಿರುತ್ತದೆ.
ಆದರೆ ದಾಖಲಾತಿಗಳ ಪರಿಶೀಲನೆ ನಡೆದು ಒಂದು ವರ್ಷ ಕಳೆದರೂ ಇದುವರೆಗೂ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸುವ ಕೆಲಸವನ್ನು ಪಿಯು ಶಿಕ್ಷಣ ಇಲಾಖೆ ಮಾಡಿಲ್ಲ. ಹತ್ತಾರು ಬಾರಿ ಆಯ್ಕೆ ಪಟ್ಟಿಯಲ್ಲಿರುವ ಆರ್ಹ ಪಿಯು ಶಿಕ್ಷಕ ಆಕಾಂಕ್ಷಿಗಳು ಶಿಕ್ಷಣ ಇಲಾಖೆಯ ಸಚಿವರಾದ ಎಸ್.ಸುರೇಶ್ ಕುಮಾರ್, ವಿರೋಧ ಪಕ್ಷಗಳ ನಾಯಕರುಗಳ ಮನೆ ಬಾಗಿಲಿಗೆ ಅಲೆದು, ನಾನಾ ರೀತಿಯಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಅರ್ಹ ಪಿಯು ಉಪನ್ಯಾಸಕರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಆರು ವರ್ಷಗಳಿಂದ ಇನ್ನೇನು ಪಿಯು ಉಪನ್ಯಾಸಕನಾಗಿ ನೇಮಕಗೊಳ್ಳುತ್ತೇನೆ ಎಂಬ ಆಸೆಯಲ್ಲಿ ಕೆಲವರು ಮದುವೆಯನ್ನು ಮುಂದೂಡುತ್ತಾ ಬಂದರೆ, ಮತ್ತೆ ಕೆಲವರು ಇದನ್ನು ನಂಬಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ವಯಸ್ಸಿನ ಮಿತಿ ಮೀರುತಿದೆ. ಇದರಿಂದ ಹಲವಾರು ಸಂಕಷ್ಟಗಳನ್ನು ಪಿಯು ಶಿಕ್ಷಕರಾಗಿ ಆಯ್ಕೆಯಾಗಿ ನೇಮಕಾತಿ ಪತ್ರಕ್ಕಾಗಿ ಅಲೆದಾಡುತ್ತಿರುವ ಶಿಕ್ಷಕರದ್ದಾಗಿದೆ. ಪಿಯು ಶಿಕ್ಷಣ ಮಂಡಳಿ ಮತ್ತು ರಾಜಕಾರಣಿಗಳ ನಡುವಿನ ಮುಸುಕಿನ ಗುದ್ದಾಟವೇ ಈ ರೀತಿಯ ವಿಳಂಬಕ್ಕೆ ಕಾರಣ ಎಂಬುದು ಹಲವು ಅಭ್ಯರ್ಥಿಗಳ ಅಭಿಪ್ರಾಯವಾಗಿದೆ.
ಪ್ರಸಕ್ತ ಸಾಲಿನ ಅಂದರೆ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಸ್ಥಿತಿಗತಿ, ಇನ್ನಿತರ ಮಾಹಿತಿ ಕಲೆ ಹಾಕಲು ಪ್ರವಾಸದಲ್ಲಿರುವ ಶಿಕ್ಷಣ ಸಚಿವರು ಪಿಯು ಶಿಕ್ಷಕರ ನೇಮಕಾತಿ ಪತ್ರ ವಿತರಿಸುವ ನಿಟ್ಟಿನಲ್ಲಿಯೂ ಗಮನಹರಿಸಬೇಕೆಂಬುದು ಉದ್ಯೋಗಾಕಾಂಕ್ಷಿಗಳ ಒತ್ತಾಯವಾಗಿದೆ.
ಕಳೆದ 6 ವರ್ಷಗಳಿಂದ ಪಿಯು ಶಿಕ್ಷಕನಾಗಿ ನೇಮಕಗೊಳ್ಳುತ್ತೇನೆ ಎಂಬ ಕಾರಣದಿಂದ ಬೇರೆಲ್ಲೂ ಗಮನಹರಿಸಿಲ್ಲ. ನಮಗೆ ವಯಸ್ಸಾಗುತ್ತ ಬಂದಿದೆ. ಈಗಲೇ ಸಾಕಷ್ಟು ವಿಳಂಬವಾಗಿದ್ದು, ಸರಕಾರ ಪಿಯು ಶಿಕ್ಷಣದ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ದಾಖಲಾತಿ ಪರಿಶೀಲನೆಯಾಗಿರುವ ಅಭ್ಯರ್ಥಿಗಳೀಗೆ ನೇಮಕಾತಿ ಪತ್ರ ವಿತರಿಸಿ, ನಮನ್ನು ಸಂಕಷ್ಟದಿಂದ ಪಾರು ಮಾಡಿ
-ಜಯರಾಮು ಲಿಂಗದಹಳ್ಳಿ ಪಾವಗಡ ತಾಲೂಕು







