ವಿಳಂಬಿತ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮೇಲಿನ ಬಡ್ಡಿ ಶೇ.50ರಷ್ಟು ಕಡಿತ
![ವಿಳಂಬಿತ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮೇಲಿನ ಬಡ್ಡಿ ಶೇ.50ರಷ್ಟು ಕಡಿತ ವಿಳಂಬಿತ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮೇಲಿನ ಬಡ್ಡಿ ಶೇ.50ರಷ್ಟು ಕಡಿತ](https://www.varthabharati.in/sites/default/files/images/articles/2020/06/12/247145-1591985304.jpg)
ಹೊಸದಿಲ್ಲಿ,ಜೂ.12: ಜಿಎಸ್‌ಟಿ ನಿಯಮಗಳಲ್ಲಿ ಸಡಿಲಿಕೆಯನ್ನು ಪ್ರಕಟಿಸಿರುವ ಸರಕಾರವು,ಯಾವುದೇ ತೆರಿಗೆ ಬಾಧ್ಯತೆಯನ್ನು ಹೊಂದಿರದವರು ಮತ್ತು ಜುಲೈ 2017-ಜನವರಿ 2020ರ ನಡುವೆ ರಿಟರ್ನ್‌ಗಳನ್ನು ಸಲ್ಲಿಸದವರಿಗೆ ಯಾವುದೇ ವಿಳಂಬ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ತಿಳಿಸಿದೆ. ಕೊರೋನ ವೈರಸ್ ಲಾಕ್‌ಡೌನ್ ಘೋಷಣೆಯ ಬಳಿಕ ಶುಕ್ರವಾರ ಮೊದಲ ಬಾರಿಗೆ ಜಿಎಸ್‌ಟಿ ಮಂಡಳಿಯ ಸಭೆಯು ನಡೆಯಿತು.
ತೆರಿಗೆ ಏರಿಕೆ ಸಾಧ್ಯತೆಯನ್ನು ತಳ್ಳಿಹಾಕಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಇದು ತೆರಿಗೆಗಳನ್ನು ಹೆಚ್ಚಿಸುವ ಸಮಯವಲ್ಲ ಎಂದು ರಾಜ್ಯಗಳು ತಿಳಿಸಿರುವ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳದ ಎಲ್ಲ ಪ್ರಸ್ತಾವಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಜವಳಿ ಮತ್ತು ಸಿದ್ಧ ಉಡುಪುಗಳು,ರಸಗೊಬ್ಬರಗಳು ಮತ್ತು ಪಾದರಕ್ಷೆಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಲು ಸರಕಾರವು ಉದ್ದೇಶಿಸಿತ್ತು.
ಸರಕಾರವು ಐದು ಕೋ.ರೂ.ವರೆಗೆ ವಹಿವಾಟು ಹೊಂದಿರುವ ಸಣ್ಣ ಉದ್ಯಮಗಳಿಗೆ ವಿಳಂಬಿತ ಜಿಎಸ್‌ಟಿ ರಿಟರ್ನ್ ಸಲ್ಲಿಕೆಯ ಮೇಲಿನ ಬಡ್ಡಿಯನ್ನೂ ಶೇ.18ರಿಂದ ಶೇ.9ಕ್ಕೆ ಇಳಿಸಿದೆ.
2020 ಫೆಬ್ರವರಿ,ಮಾರ್ಚ್ ಮತ್ತು ಎಪ್ರಿಲ್ ತಿಂಗಳುಗಳ ಜಿಎಸ್‌ಟಿ ರಿಟರ್ನ್‌ಗಳನ್ನು 2020,ಜು.6ರೊಳಗೆ ಸಲ್ಲಿಸಿದರೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಜುಲೈ 6ರ ನಂತರ 2020,ಸೆಪ್ಟೆಂಬರ್ 30ರವರೆಗೆ ಸಲ್ಲಿಕೆಯಾಗುವ ರಿಟರ್ನ್‌ಗಳಿಗೆ ಶೇ.9ರಷ್ಟು ಬಡ್ಡಿಯನ್ನು ವಿಧಿಸಲಾಗುವುದು ಎಂದು ಸರಕಾರವು ತಿಳಿಸಿದೆ.