ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ ರೈಜಿ ನಿಧನ

ರೈಜಿ ಈ ವರ್ಷ ಜನವರಿಯಲ್ಲಿ 100ನೇ ವಯಸ್ಸಿಗೆ ಕಾಲಿಟ್ಟಾಗ ಮುಂಬೈನ ಅವರ ಮನೆಗೆ ಭೇಟಿ ನೀಡಿದ್ದ ಸಚಿನ್ ತೆಂಡುಲ್ಕರ್ ಹಾಗೂ ಸ್ಟೀವ್ ವಾ.
ಹೊಸದಿಲ್ಲಿ,ಜೂ.13:ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿ ಶನಿವಾರ ಬೆಳಗ್ಗಿನ ಜಾವ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.
ವಸಂತ್ ರೈಜಿ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ವಯೋಸಹಜ ಕಾರಣದಿಂದ ರೈಜಿ ಅವರು ಬೆಳಗ್ಗಿನ ಜಾವ 2:20ರ ಸುಮಾರಿಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ಅವರ ನಿವಾಸದಲ್ಲಿ ನಿದ್ದೆಯಲ್ಲಿರುವಾಗಲೇ ಚಿರನಿದ್ರೆಗೆ ಜಾರಿದರು ಎಂದು ರೈಜಿ ಅವರ ಅಳಿಯ ಸುದರ್ಶನ್ ನವನಟಿ ಪಿಟಿಐಗೆ ತಿಳಿಸಿದ್ದಾರೆ.
ಬಲಗೈ ಬ್ಯಾಟ್ಸ್ಮನ್ ರೈಜಿ 1940ರಲ್ಲಿ 9 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಾರೆ.ಒಟ್ಟು 277 ರನ್ ಗಳಿಸಿದ್ದಾರೆ. 68 ಗರಿಷ್ಟ ವೈಯಕ್ತಿಕ ಸ್ಕೋರಾಗಿದೆ. 1939ರಲ್ಲಿ ನಾಗ್ಪುರದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತಂಡದ ಪರ ಸೆಂಟ್ರಲ್ ಪ್ರಾವಿನ್ಸಸ್ ಪರ ಆಡುವ ಮೂಲಕ ಕ್ರಿಕೆಟ್ ರಂಗಕ್ಕೆ ಕಾಲಿಟ್ಟಿದ್ದರು. 1941ರಲ್ಲಿ ಮುಂಬೈ ಪರ ಚೊಚ್ಚಲ ಪಂದ್ಯ ಆಡಿದ್ದರು. ವಿಜಯ ಮರ್ಚಂಟ್ ನಾಯಕತ್ವದಲ್ಲಿ ವೆಸ್ಟರ್ನ್ ಇಂಡಿಯಾ ಪರ ಆಡಿದ್ದರು.
ಭಾರತವು ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನಾದಲ್ಲಿ ಮೊತ್ತ ಮೊದಲ ಟೆಸ್ಟ್ ಪಂದ್ಯ ಆಡಿದ್ದಾಗ ರೈಜಿಗೆ ಆಗ 13 ವಯಸ್ಸಾಗಿತ್ತು. ಕ್ರಿಕೆಟ್ ಇತಿಹಾಸತಜ್ಞ ಹಾಗೂ ಲೆಕ್ಕಪರಿಶೋಧಕರೂ ಆಗಿದ್ದ ರೈಜಿ ಜನವರಿಯಲ್ಲಿ 100ನೇ ವಯಸ್ಸಿಗೆ ಕಾಲಿಟ್ಟ ಸಂದರ್ಭದಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಹಾಗೂ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ವಾ ಅವರು ರೈಜಿ ನಿವಾಸಕ್ಕೆ ಸೌಜನ್ಯದ ಭೇಟಿ ನೀಡಿದ್ದರು.
ಇಂದು ನಿಧನರಾಗಿರುವ ರೈಜಿ ಅವರ ಅಂತ್ಯಕ್ರಿಯೆ ದಕ್ಷಿಣ ಮುಂಬೈನ ಚಾಂದವಾಡಿಯಲ್ಲಿ ಶನಿವಾರ ಮಧ್ಯಾಹ್ನ ನೆರವೇರಲಿದೆ ಎಂದು ತಿಳಿದುಬಂದಿದೆ.







