ನೌಷಾದ್ ಖಾಸಿಂಜಿ ಹತ್ಯೆ ಪ್ರಕರಣ ಸಿಸಿಬಿಗೆ ಹಸ್ತಾಂತರ
ಪ್ರಕರಣದಲ್ಲಿ ರವಿ ಪೂಜಾರಿ ಕೈವಾಡ ಶಂಕೆ

ಮಂಗಳೂರು, ಜೂ.13: ಹನ್ನೊಂದು ವರ್ಷಗಳ ಹಿಂದೆ (2009) ಮಂಗಳೂರಿನಲ್ಲಿ ನಡೆದಿದ್ದ ಖ್ಯಾತ ಕ್ರಿಮಿನಲ್ ನ್ಯಾಯವಾದಿ ನೌಷಾದ್ ಖಾಸಿಂಜಿ ಹತ್ಯೆ ಪ್ರಕರಣವನ್ನು ಬೆಂಗಳೂರು ನಗರ ಅಪರಾಧ ಪತ್ತೆದಳ(ಸಿಸಿಬಿ)ಕ್ಕೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಮಂಗಳೂರಿಗೆ ಆಗಮಿಸಿದ್ದು, ಪ್ರಕರಣದ ತನಿಖೆ ಕೈಗೊಂಡಿದೆ.
ಮೂಲತಃ ಭಟ್ಕಳದವರಾಗಿದ್ದ ನೌಷಾದ್ ಖಾಸಿಂಜಿಯವರನ್ನು 2009ರ ಎ.9ರಂದು ನಗರದ ಫಳ್ನೀರ್ ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೂ ಮುನ್ನ ಖಾಸಿಂಜಿಯವರಿಗೆ ಭೂಗತ ಪಾತಕಿ ರವಿ ಪೂಜಾರಿ ಕೊಲೆ ಬೆದರಿಕೆ ಹಾಕಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಸದ್ಯ ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರು ಪೊಲೀಸರ ವಶದಲ್ಲಿದ್ದು, ನೌಷಾದ್ ರ ಹತ್ಯೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ನಡೆದ ಸಂದರ್ಭದಲ್ಲಿ ನೌಶಾದ್ ಅವರು ಅಬ್ದುಲ್ ರಶೀದ್ ಹಸನ್ (ಮಲಬಾರಿ) ಪ್ರಕರಣವನ್ನು ನಿಭಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರವಿ ಪೂಜಾರಿಯು ನೌಷಾದ್ ಅವರ ಮೇಲೆ ಕಣ್ಣಿಟ್ಟಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಾಗಾಗಿಯೇ ನೌಷಾದ್ ಖಾಸಿಂಜಿ ಹತ್ಯೆ ಪ್ರಕರಣವನ್ನು ಬೆಂಗಳೂರು ಸಿಸಿಬಿಗೆ ವಹಿಸಲಾಗಿದೆ. ಸಿಸಿಬಿ ತಂಡವು ತನಿಖೆ ಆರಂಭಿಸಿದೆ.







