ದಲಿತ ಯುವತಿಯ ಅತ್ಯಾಚಾರ :ಆರೋಪಿ ಬಂಧನಕ್ಕೆ ಅಂಬೇಡ್ಕರ್ ಯುವಸೇನೆಯಿಂದ ವಾರದ ಗಡುವು

ಉಡುಪಿ, ಜೂ.13: ದಲಿತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ ಗರ್ಭಪಾತ ಮಾಡಿರುವ ಆರೋಪಿ ಕರಂಬಳ್ಳಿಯ ಅಕ್ಷಯ ಶೆಟ್ಟಿ(23) ಎಂಬಾತನನ್ನು ಕೂಡಲೇ ಬಂಧಿಸಬೇಕೆಂದು ಉಡುಪಿ ಅಂಬೇಡ್ಕರ್ ಯುವಸೇನೆ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಯುವ ಸೇನೆಯ ಗೌರವಾ ಧ್ಯಕ್ಷ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಅಕ್ಷಯ ಶೆಟ್ಟಿ ಒಂದೂವರೆ ವರ್ಷಗಳ ಹಿಂದೆ ಚಂಡೆ ತರಬೇತಿಯಲ್ಲಿ ವಡಭಾಂಡೇಶ್ವರದ 30 ವರ್ಷ ಹರೆಯದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಆಕೆಯ ಸ್ನೇಹವನ್ನು ದುರುಪಯೋಗಪಡಿಸಿಕೊಂಡ ಆತ, 2019ರ ಅ.1ರಂದು ತನ್ನ ಮನೆಗೆ ಕರೆಸಿ, ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದನು ಎಂದು ದೂರಿದರು. ಮದುವೆಯಾಗುವುದಾಗಿ ನಂಬಿಸಿದ ಆತನ ಜೊತೆ ಆಕೆ ನಂತರದ ದಿನ ಗಳಲ್ಲಿ ಸಾಕಷ್ಟು ಅನೋನ್ಯಳಾಗಿದ್ದಳು. ಇದರ ಪರಿಣಾಮ ನ.11ರಂದು ಪರೀಕ್ಷಿಸಿದಾಗ ಆಕೆ ಗರ್ಭವತಿಯಾಗಿರುವುದು ತಿಳಿದುಬಂತು. ಬಳಿಕ ಆತ ಆಕೆಗೆ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದನು. ಈ ಬೆಳವಣಿಗೆಯ ನಂತರ ಆತ, ಆಕೆಯಿಂದ ದೂರ ಆಗಲು ಯತ್ನಿಸಿದನು. ದೂರಿನ ಹಿನ್ನೆಲೆಯಲ್ಲಿ 2020 ಮೇ 26ರಂದು ಮಹಿಳಾ ಠಾಣೆಯಲ್ಲಿ ಮದುವೆಯಾಗುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದನು ಎಂದು ಅವರು ತಿಳಿಸಿದರು.
ಜೂ.5ರಂದು ಆಕೆಯ ಮನೆಗೆ ಬಂದ ಅಕ್ಷಯ್, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದನು. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಅಕ್ಷಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಪೊಲೀಸರು ಆರೋಪಿಯನ್ನು ಈವರೆಗೆ ಬಂಧಿಸಿಲ್ಲ. ಇದು ಇಡೀ ದಲಿತ ಸಮಾಜಕ್ಕೆ ಮಾಡಿದ ದ್ರೋಹ ಮತ್ತು ವಂಚನೆಯಾಗಿದೆ. ಮುಂದಿನ ಒಂದು ವಾರದೊಳಗೆ ಆರೋಪಿಯನ್ನು ಬಂಧಿಸದಿದ್ದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ಯುವಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್, ಗುಣವಂತ ಪಾಲನ್ ತೊಟ್ಟಂ, ಮಂಜುನಾಥ ಕಪ್ಪೆಟ್ಟು, ಸುಮಿತ್ ರಾಜ್ ನೆರ್ಗಿ ಉಪಸ್ಥಿತರಿದ್ದರು.







