ದುಬೈಯಲ್ಲಿ ಸಂಕಷ್ಟದಲ್ಲಿದ್ದವರಿಗೆ ನೆರವಾದ ಭಟ್ಕಳ ಉದ್ಯಮಿ ಅತಿಕುರ್ರಹ್ಮಾನ್: ತಾಯ್ನಾಡು ಸೇರಿದ 184 ಮಂದಿ ಕನ್ನಡಿಗರು

ಭಟ್ಕಳ : 40 ದಿನಗಳ ವೀಸಾ ಪಡೆದು ಫೆಬ್ರವರಿಯಲ್ಲಿ ಭಟ್ಕಳದಿಂದ ದುಬೈಗೆ ಹೋಗಿದ್ದು, ಕೆಲವೇ ದಿನಗಳಲ್ಲಿ ಕರೋನ ವೈರಸ್ ಬೆಳಕಿಗೆ ಬಂದಿತು. ದುಬೈ ಸೇರಿದಂತೆ ಭಾರತವೂ ಲಾಕ್ಡೌನ್ ಆಗಿತ್ತು. ನಾನು ದುಬೈಗೆ ಆಗಮಿಸಿ ತುಂಬಾ ಸಂಕಷ್ಟಕ್ಕೆ ಸಿಲುಕಿಕೊಂಡೆ. ಕೆಲಸವಿಲ್ಲ, ತಿನ್ನಲು ಆಹಾರ ಇಲ್ಲ ಮತ್ತು ಹಿಂದಿರುಗಲು ವಿಮಾನ ಸೇವೆ ಇಲ್ಲ, ಈ ಸಮಸ್ಯೆಯಿಂದ ರಕ್ಷಿಸಲು ಭಟ್ಕಳ ಮೂಲದ ಉದ್ಯಮಿ ಅತಿಕುರ್ರಹ್ಮಾನ್ ಮುನಿರಿ ಮಂಗಳೂರಿಗೆ ವಿಮಾನದ ವ್ಯವಸ್ಥೆ ಮಾಡಿದರು. ಇದು ನನಗೆ ಮತ್ತು ನನ್ನಂತಹ ಅನೇಕರಿಗೆ ದೊಡ್ಡ ವರದಾನವಾಯಿತು. ಇಂದು ನಾನು ಸುರಕ್ಷಿತವಾಗಿ ಊರು ಸೇರಿದ್ದೇನೆ. ನಾವು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ದುಬೈಯಿಂದ ಬಾಡಿಗೆ ವಿಮಾನದ ಮೂಲಕ ಶನಿವಾರ ಭಟ್ಕಳ ತಲುಪಿದ ಪ್ರಯಾಣಿಕರೊಬ್ಬರ ಮನದಾಳದ ಮಾತು. ಮಾತ್ರವಲ್ಲ ಎಲ್ಲರ ಅಭಿಪ್ರಾಯವೂ ಇದೆ ಆಗಿದೆ.
ಲಾಕ್ಡೌನ್ ನಿಂದಾಗಿ ದುಬೈ, ಯುಎಇ ಯಲ್ಲಿ ಸಿಲುಕಿದ ಭಟ್ಕಳ ಮತ್ತು ಸುತ್ತಮುತ್ತಲಿನ ಸಾವಿರಾರು ಕನ್ನಡಿಗರ ಪೈಕಿ 184 ಮಂದಿ ಶನಿವಾರ ಬಾಡಿಗೆ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ 4 ಖಾಸಗಿ ಬಸ್ಸುಗಳಲ್ಲಿ ಭಟ್ಕಳ ತಲುಪಿದರು.
ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್ ಮಾಲಕ ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷರಾದ ಅತಿಕುರ್ರಹ್ಮಾನ್ ಮುನಿರಿ ಮುಂದಾಳುತ್ವದಲ್ಲಿ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಕೊನೆಗೆ ಭಟ್ಕಳವನ್ನು ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ.
ಶುಕ್ರವಾರ (ದುಬೈ ಸಮಯ) ರಾತ್ರಿ 11: 20ಕ್ಕೆ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ಬಾಡಿಗೆ ವಿಮಾನವು ಶನಿವಾರ ಮುಂಜಾನೆ 4: 20 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತು. ಮಂಗಳೂರಿನಿಂದ ಮೊದಲೆ ನಿರ್ಧರಿಸಿದಂತೆ ಅಲ್ಲಿ ಭಟ್ಕಳ ಮುಸ್ಲಿಮ್ ಜಮಾಅತ್ ಮಂಗಳೂರು ಹಾಗೂ ತಂಝೀಮ್ ಸಂಸ್ಥೆಯ ಉಸ್ತುವಾರಿಯಲ್ಲಿ 4 ಖಾಸಗಿ ಬಸ್ಸುಗಳ ಮೂಲಕ 184 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಭಟ್ಕಳ ಸೇರಿದರು. ಇದರಲ್ಲಿ ಗರ್ಭಿಣಿಯರು ಸೇರಿದಂತೆ ಮಕ್ಕಳು, ವಯೋವೃದ್ಧರು ಇದ್ದರು.
ಈ ಕುರಿತಂತೆ ಭಟ್ಕಳ ಪ್ರಯಾಣದ ಎಲ್ಲ ವ್ಯವಸ್ಥೆಯನ್ನು ಮಾಡಿರುವ ಅತಿಕುರ್ರಹ್ಮಾನ್ ಮುನಿರಿ ಶುಕ್ರವಾರ ರಾಸ್ ಅಲ್ –ಖೈಮಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದು, ಈ ಕಾರ್ಯಕ್ಕಾಗಿ ಸಹಕರಿಸಿದ ಭಾರತೀಯ ರಾಯಭಾರಿ ಕಚೇರಿ ಹಾಗೂ ಮಂಗಳೂರು ಮತ್ತು ಉತ್ತರಕನ್ನಡ ಜಿಲ್ಲಾಧಿಕಾರಿ ಹಾಗೂ ಇತರರನ್ನು ಅಭಿನಂದಿಸಿದ್ದಾರೆ.
ಎಲ್ಲರಿಗೂ ಕ್ವಾರೈಂಟೇನ್: ಭಟ್ಕಳಕ್ಕೆ ಬಂದಿಳಿದ ಎಲ್ಲ ಪ್ರಯಾಣಿಕರನ್ನು ನೇರವಾಗಿ ಕ್ವಾರೈಂಟೈನ್ ಕೇಂದ್ರಗಳಿಗೆ ತಲುಪಿಸಲಾಗಿದೆ.






.jpeg)
.jpeg)
.jpeg)

