ಲಾಕ್‍ಡೌನ್ ಉಲ್ಲಂಘಿಸಿ ಹಾವೇರಿಯಲ್ಲಿ ಜಾತ್ರೆ: 69 ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಹಾವೇರಿ, ಜೂ.13: ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಗುರುವಾರ ಬ್ರಹ್ಮಲಿಂಗೇಶ್ವರ ಜಾತ್ರೆ ನಡೆಸಲಾಗಿದ್ದು, ಜಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ಜಾತ್ರೆಯ ಆಯೋಜಕರ ಪೈಕಿ 69 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊರೋನ ಸಾಂಕ್ರಾಮಿಕದ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸದೆ, ಸಾವಿರಾರು ಮಂದಿಯನ್ನು ಸೇರಿಸಿ, ಜಾತ್ರೆ ಮಾಡಿದ್ದರಿಂದ ಆಯೋಜಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ರಹ್ಮಲಿಂಗೇಶ್ವರ ಜಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿತ್ತು. ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬ ವರ್ಗದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿಯ ಆದೇಶದ ಹೊರತಾಗಿಯೂ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಮಿತಿಯ ಸದಸ್ಯರು ದೇವಸ್ಥಾನದ ಆವರಣದಲ್ಲಿ ಕಾರಹುಣ್ಣಿಮೆ ಮಹೋತ್ಸವವನ್ನು ಆಯೋಜಿಸಿದ್ದರು ಎನ್ನಲಾಗಿದ್ದು, ಜಿಲ್ಲಾಡಳಿತ ವಿಧಿಸಿದ್ದ ಸಿಆರ್‍ಪಿಸಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಎತ್ತಿನಗಾಡಿಗಳ ಮೆರವಣಿಗೆಯನ್ನು ನಡೆಸಿದರು. ಇದರಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
'ಹಾವೇರಿ ಗ್ರಾಮಾಂತರ ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಳಾದಂಡಿ ತಿಳಿಸಿದ್ದಾರೆ.
ಕರ್ಜಗಿ ಗ್ರಾಮಸ್ಥರು ಕಳೆದ ವಾರ ನನ್ನನ್ನು ಭೇಟಿ ಮಾಡಿ ಕಾರಾ ಹುಣ್ಣಿಮೆ ಮಹೋತ್ಸವ ನಡೆಸಲು ಅವಕಾಶ ಕೋರಿದ್ದರು. ಆದರೆ, ನಾನು ಅದಕ್ಕೆ ಅನುಮತಿ ನೀಡಲಿಲ್ಲ. ಹಾವೇರಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಗ್ರಾಮಸ್ಥರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಜಾತ್ರೆಯನ್ನು ಆಯೋಜನೆ ಮಾಡದಂತೆ ಸೂಚನೆ ನೀಡಿದ್ದರು. ಅದಾಗ್ಯೂ, ಅವರು ಲಾಕ್‍ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಜಾತ್ರೆಯನ್ನು ಮಾಡಿದ್ದಾರೆ. ಇದಕ್ಕೆ ಕಾರಣಕರ್ತರಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
Villagers gather for annual religious fair in Haveri, Karnataka. pic.twitter.com/Dx1Fp82259
— Mohammed Zubair (@zoo_bear) June 12, 2020







