ಉಡುಪಿ: ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ; 1,005ಕ್ಕೇರಿಕೆ
ಒಟ್ಟು 720 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಉಡುಪಿ, ಜೂ.13: ಉಡುಪಿಯಲ್ಲಿ ಶನಿವಾರ ಒಟ್ಟು 15 ನೋವೆಲ್ ಕೊರೋನ ವೈರಸ್ (ಕೋವಿಡ್-19) ಪಾಸಿಟಿವ್ ಪ್ರಕರಣಗಳು ವರದಿ ಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ ರಾಜ್ಯದಲ್ಲೇ ಮೊದಲ ಬಾರಿ ಸಾವಿರದ ಗಡಿಯನ್ನು ದಾಟಿದ್ದು, ಇದೀಗ 1005ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಶನಿವಾರ ಸೋಂಕು ಪತ್ತೆಯಾದವರಲ್ಲಿ 9ಮಂದಿ ಪುರುಷರು ಹಾಗೂ ಐವರು ಮಹಿಳೆಯರು ಹಾಗೂ ಆರು ವರ್ಷದ ಹೆಣ್ಣು ಮಗು ಸೇರಿದೆ. ಇವರೆಲ್ಲರೂ ಮುಂಬೈ ಹಾಗೂ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ಕುಂದಾಪುರ ತಾಲೂಕಿನ 13 ಮಂದಿ ಹಾಗೂ ಕಾರ್ಕಳ ತಾಲೂಕಿನ ಇಬ್ಬರು ಇದರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಒಟ್ಟು 720 ಮಂದಿ ಬಿಡುಗಡೆ: ಉಡುಪಿ ಜಿಲ್ಲೆ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೂ, ಈವರೆಗೆ ಪಾಸಿಟಿವ್ ಬಂದವರಲ್ಲಿ ಸುಮಾರು ಶೇ.70ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆ ಗಳಿಂದ ಬಿಡುಗಡೆಗೊಂಡಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ ಯಾಗಿದೆ.
ಇಂದು ಸಂಜೆಯವರೆಗೆ ಜಿಲ್ಲೆಯಲ್ಲಿ ಒಟ್ಟು 720 ಮಂದಿ ಕೋವಿಡ್-19ರ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು ತಮ್ಮ ಮನೆಗಳಿಗೆ ತೆರಳಿದ್ದಾರೆ. ಇವರಲ್ಲಿ ನಿನ್ನೆ ಸಂಜೆಯಿಂದ 139 ಮಂದಿ ಬಿಡುಗಡೆಗೊಂಡಿದ್ದಾರೆ ಎಂದು ಡಿಎಚ್‌ಓ ಡಾ. ಸೂಡ ತಿಳಿಸಿದರು.
ಹೀಗಾಗಿ ಒಟ್ಟು 1005 ಪಾಸಿಟಿವ್ ಪ್ರಕರಣಗಳಲ್ಲಿ ಈಗ ಆಸ್ಪತ್ರೆಗಳಲ್ಲಿ (ಸಕ್ರಿಯ ಪ್ರಕರಣ) ಚಿಕಿತ್ಸೆ ಪಡೆಯುತ್ತಿರುವವರು 285 ಮಂದಿ ಮಾತ್ರ ಎಂಬುದು ನಮಗೆ ತೃಪ್ತಿ ನೀಡುವ ವಿಷಯ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಈವರೆಗೆ ಓರ್ವರು ಮೃತಪಟ್ಟಿದ್ದಾರೆ.







