ಸಜಿಪನಡು: ಶಿವನ ವಿಗ್ರಹದ ಪೀಠಕ್ಕೆ ಹತ್ತಿ ವೀಡಿಯೊ ಮಾಡಿದ ಆರೋಪ; ನಾಲ್ವರ ಬಂಧನ

ಬಂಟ್ವಾಳ, ಜೂ.13: ಸಜೀಪ ನಡು ಗ್ರಾಮದ ಕಂಚಿನಡ್ಕ ಪದವು ಹಿಂದೂ ರುದ್ರ ಭೂಮಿಯಲ್ಲಿರುವ ಶಿವನ ವಿಗ್ರಹದ ಪೀಠದ ಮೇಲೆ ಹತ್ತಿ ಟಿಕ್ ಟಾಕ್ ವೀಡಿಯೊ ಮಾಡಿರುವ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಜೀಪನಡು ಗ್ರಾಮ ನಿವಾಸಿಗಳಾದ ಮಸೂದ್(20), ಅಝೀಮ್(20), ಅಬ್ದುಲ್ ಲತೀಫ್(20) ಮತ್ತು ಅರ್ಫಾಝ್ (20) ಬಂಧಿತ ಆರೋಪಿಗಳು.
ಕಂಚಿನಡ್ಕ ಪದವು ರುದ್ರ ಭೂಮಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿರುವ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಹತ್ತಿರುವ ಆರೋಪಿಗಳು ಟಿಕ್ ಟಾಕ್ ವೀಡಿಯೊ ಮಾಡಿದ್ದಾರೆ. ಎಂಟು ತಿಂಗಳ ಹಿಂದೆ ಮಾಡಿದೆನ್ನಲಾದ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರದಿಂದ ಹರಿದಾಡುತ್ತಿದೆ.
ಆರೋಪಿಗಳ ಈ ಕೃತ್ಯದಿಂದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ ಎಂದು ರುದ್ರ ಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Next Story





