ವೈವಿಧ್ಯತೆ, ಸಾಮುದಾಯಿಕ ಭಾವನೆ ಆಸ್ಕರ್ ಪ್ರಶಸ್ತಿಗಳ ಹೊಸ ಅರ್ಹತೆ
ಅಕಾಡಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸಯನ್ಸಸ್
ಏಂಜಲಿಸ್, ಜೂ. 13: ತಮ್ಮ ಚಿತ್ರಗಳು ಆಸ್ಕರ್ ಪ್ರಶಸ್ತಿಗಳಿಗೆ ಅರ್ಹವಾಗಲು ಚಿತ್ರ ನಿರ್ಮಾಪಕರು ಅಳವಡಿಸಿಕೊಳ್ಳಬೇಕಾದ ವೈವಿಧ್ಯತೆ ಮತ್ತು ಸಾಮುದಾಯಿಕ ಭಾವನೆಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸುವುದಾಗಿ ಅಕಾಡಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸಯನ್ಸಸ್ ಶುಕ್ರವಾರ ತಿಳಿಸಿದೆ.
ವೈವಿಧ್ಯತೆಯನ್ನು ಎತ್ತಿಹಿಡಿಯುವುದಕ್ಕಾಗಿ ನೂತನ 5 ವರ್ಷಗಳ ಪ್ರಯತ್ನಗಳ ಹಂತವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಸಂಘಟನೆ ತಿಳಿಸಿದೆ. ಬಿಳಿಯರಲ್ಲದವರು ನಿರ್ಮಿಸುವ ಚಿತ್ರಗಳು ಮತ್ತು ಬಿಳಿಯರಲ್ಲದ ಸಾಧಕರನ್ನು ಗೌರವಿಸುವಲ್ಲಿ ಈ ಸಂಸ್ಥೆಯು ಹಿಂದುಳಿದಿದೆ ಎಂಬ ಟೀಕೆಗಳನ್ನು ಅದು ಈಗಾಗಲೇ ಎದುರಿಸುತ್ತಿದೆ.
ಆಸ್ಕರ್ ಪ್ರಶಸ್ತಿ ಬಯಸುವ ಚಿತ್ರಗಳಲ್ಲಿ ವೈವಿಧ್ಯ ಸಂಸ್ಕತಿ ಮತ್ತು ಸಾಮುದಾಯಿಕ ಭಾವನೆಗಳು ಮೇಳೈಸುವಂತೆ ಮಾಡುವುದಕ್ಕಾಗಿ ಜುಲೈ 31ರ ವೇಳೆಗೆ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲು ಅಮೆರಿಕದ ಚಿತ್ರನಿರ್ಮಾಪಕರ ಒಕ್ಕೂಟದೊಂದಿಗೆ ಮಾತುಕತೆ ನಡೆಸುವುದಾಗಿ ಅಕಾಡೆಮಿ ತಿಳಿಸಿದೆ.
ಆದರೆ, ಹೊಸ ನಿಯಮಗಳು 2021ರಲ್ಲಿ ನೀಡಲಾಗುವ ಮುಂದಿನ ಆಸ್ಕರ್ ಪ್ರಶಸ್ತಿಗಳಿಗೆ ಸ್ಪರ್ಧಿಸುವ ಚಿತ್ರಗಳಿಗೆ ಅನ್ವಯಿಸುವುದಿಲ್ಲ.
ಮಿನಪೊಲಿಸ್ ನಗರದಲ್ಲಿ ಕಳೆದ ತಿಂಗಳು ಬಿಳಿಯ ಪೊಲೀಸ್ ಅಧಿಕಾರಿಯ ಕೈಯಲ್ಲಿ ಕರಿಯ ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಜಗತ್ತಿನಾದ್ಯಂತ ಬಲಪಡೆದುಕೊಳ್ಳುತ್ತಿರುವ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿಯ ಹಿನ್ನೆಲೆಯಲ್ಲಿ ಅಕಾಡೆಮಿಯು ಈ ಕ್ರಮ ತೆಗೆದುಕೊಂಡಿದೆ.







