ಕೊರೋನ ಪ್ರಕರಣ ದ್ವಿಗುಣವಾಗುವ ಅವಧಿ ವೃದ್ಧಿ: ಆರೋಗ್ಯ ಇಲಾಖೆಯ ಹೇಳಿಕೆ

ಹೊಸದಿಲ್ಲಿ, ಜೂ.13: ದೇಶದಲ್ಲಿ ಕೊರೋನ ಸೋಂಕು ಪ್ರಕರಣ ದ್ವಿಗುಣಗೊಳ್ಳುವ ಅವಧಿ 17.4 ದಿನಗಳಿಗೆ ಹೆಚ್ಚಿದೆ. ಎರಡು ವಾರದ ಹಿಂದೆ ಈ ಅವಧಿ 15.4 ದಿನವಾಗಿತ್ತು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಮಾರ್ಚ್ 25ರಂದು ಲಾಕ್‌ಡೌನ್ ಜಾರಿಗೊಳಿಸಿದ ಸಂದರ್ಭ ದೇಶದಲ್ಲಿ 3.4 ದಿನದಲ್ಲಿ ಕೊರೋನ ಸೋಂಕು ಪ್ರಕರಣ ದ್ವಿಗುಣಗೊಳ್ಳುವ(ದುಪ್ಪಟ್ಟಾಗುವ) ಪರಿಸ್ಥಿತಿಯಿತ್ತು. ಬಳಿಕ ದ್ವಿಗುಣವಾಗುವ ಅವಧಿ ಕ್ರಮೇಣ ವೃದ್ಧಿಸುತ್ತಾ ಸಾಗಿ ಇದೀಗ 17.4 ದಿನಗಳಿಗೆ ತಲುಪಿದೆ. ಜೊತೆಗೆ, ರೋಗಿಗಳ ಚೇತರಿಕೆ(ಗುಣಮುಖರಾಗುವ) ಪ್ರಮಾಣವೂ ಹೆಚ್ಚಿದ್ದು ಈಗ 49.47%ಕ್ಕೆ ತಲುಪಿದೆ ಎಂದು ಸಚಿವಾಲಯ ಹೇಳಿದೆ.
ದೇಶದಲ್ಲಿ ಕೊರೋನ ಸೋಂಕು ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಂಪುಟ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳ ಜತೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದರು. ಸೋಂಕು ಪ್ರಕರಣ ಹೆಚ್ಚುತ್ತಿರುವ ಬಗ್ಗೆ ವಿಶೇಷ ಗಮನ ನೀಡಿ, ಸೋಂಕು ಹರಡದಂತೆ ಕಠಿಣ ನಿರ್ಬಂಧ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿರ್ಬಂಧ ಕ್ರಮ, ಪರೀಕ್ಷೆ ಮತ್ತು ಪತ್ತೆ ಕಾರ್ಯಗಳ ಬಗ್ಗೆ ಗಮನ ಕೇಂದ್ರೀಕರಿಸಿ, ಆರೋಗ್ಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಚಿಕಿತ್ಸೆಗೆ ಸಂಬಂಧಿಸಿದ ಪ್ರಕ್ರಿಯೆಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ಕೊರೋನ ಸೋಂಕು ಪ್ರಕರಣಗಳನ್ನು ಆರಂಭದ ಹಂತದಲ್ಲೇ ಪತ್ತೆಹಚ್ಚಲು ಕಂಟೈನ್‌ಮೆಂಟ್ ವಲಯಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸುವ ಪ್ರಕ್ರಿಯೆ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.







