ಬೆಂಗಳೂರು: 31 ಹೊಸ ಕೊರೋನ ಪ್ರಕರಣ ದೃಢ, ಇಬ್ಬರು ಮೃತ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.13: ನಗರದ ಹಲಸೂರು ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ಮೂವರು ವ್ಯಾಪಾರಿಗಳು ಸೇರಿದಂತೆ ನಗರದಲ್ಲಿ ಒಟ್ಟು 31 ಜನರಿಗೆ ಕೊರೋನ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೆ 648 ಜನರಿಗೆ ಸೋಂಕು ತಗುಲಿದ್ದು, 29 ಜನ ಮೃತಪಟ್ಟಿದ್ದಾರೆ. ಈವರೆಗೂ 299 ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 319 ಜನ ನಗರದ ನಿಗತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 158 ವ್ಯಕ್ತಿಗಳನ್ನು ಹಾಗೂ ಈವರೆಗೂ 13,668 ವ್ಯಕ್ತಿಗಳಿಗೆ ಕೊರೋನ ತಪಾಸಣೆ ನಡೆಸಲಾಗಿದೆ. ಇನ್ನು ತೀವ್ರ ಉಸಿರಾಟದಿಂದ ಬಳಲುತಿದ್ದ 11 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವು: ರೋಗಿ ಸಂಖ್ಯೆ 6,375ರ 23 ವರ್ಷದ ಪುರುಷ ನಗರ ನಿವಾಸಿಯಾಗಿದ್ದು, ಮಧುಮೇಹದಿಂದ ಬಳಲುತ್ತಿದ್ದ. ವಿಷಮಶೀತ ಜ್ವರ(ಐಎಲ್ಐ) ಕಾಣಿಸಿಕೊಂಡಿದ್ದು, ಜ್ವರ, ವಾಂತಿ ಹಾಗೂ ತಲೆನೋವಿನಿಂದಾಗಿ ಜೂ.9ರಂದು ನಗರದ ಖಾಸಿಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ನಂತರ ಕೊರೋನ ದೃಢಪಟ್ಟಿದ್ದರಿಂದ ಜೂ.11ರಂದು ನಿಗದಿತ ಆಸ್ಪತೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ರೋಗಿ ಸಂಖ್ಯೆ 6557 ರ 62 ವರ್ಷದ ಪುರುಷ ಬೆಂಗಳೂರು ನಿವಾಸಿಯಾಗಿದ್ದು, ಆಸ್ಮಾದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಐಎಲ್ಐ ಎಂದು ಗುರುತಿಸಿ ಜೂ.11 ರಂದು ನಿಗದಿತ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ನಾಲ್ಕು ಖಾಸಗಿ ಆಸ್ಪತ್ರೆಗಳ ಪರವಾನಿಗೆ ರದ್ದು
ಬೆಂಗಳೂರಿನಲ್ಲಿ ಕೊರೋನ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮುಂಜಾಗೃತ ಕ್ರಮಕೈಗೊಳ್ಳುವ ಸಲುವಾಗಿ ಕೆಪಿಎಂಇ ನೋಂದಾಯಿತ ಆರೋಗ್ಯ ಸಂಸ್ಥೆಗಳಿಂದ ಐಎಲ್ಐ, ಸಾರಾ, ಕೋವಿಡ್ 19 ಪ್ರಕರಣಗಳ ವರದಿಗಳನ್ನು ಸಲ್ಲಿಸಲು ಆದೇಶಿಸಲಾಗಿತ್ತು. ಆದರೆ, ಆರೋಗ್ಯ ಇಲಾಖೆಯಿಂದ ಇಲ್ಲಿವರೆಗೂ ವರದಿ ಸಲ್ಲಿಸದೇ ಇರುವ 4 ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.







