ಕೊರೋನ ಸಾಂಕ್ರಾಮಿಕದಲ್ಲೂ ಬಿಜೆಪಿ ರಾಜಕೀಯ: ಶಿವಸೇನೆ ಆಕ್ರೋಶ
ಸಂಜಯ್ ರಾವುತ್
ಮುಂಬೈ : ದೇಶ ಕೋವಿಡ್-19 ಸಾಂಕ್ರಾಮಿಕದ ದವಡೆಯಲ್ಲಿ ಸಿಲುಕಿ ನಲುಗುತ್ತಿದ್ದರೆ, ಬಿಜೆಪಿಯೇತರ ಸರ್ಕಾರಗಳನ್ನು ಪತನಗೊಳಿಸುವ ಕೀಳು ರಾಜಕೀಯದಲ್ಲಿ ಬಿಜೆಪಿ ತೊಡಗಿದೆ. ಕೋವಿಡ್-19 ಸಾಂಕ್ರಾಮಿಕ, ನಿಸರ್ಗ ಚಂಡಮಾರುತದಂಥ ಸ್ಥಿತಿಯಲ್ಲೂ ರಾಜ್ಯಗಳಿಗೆ ಕೇಂದ್ರದ ನೆರವು ಸಿಗುತ್ತಿಲ್ಲ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ಸಾಪ್ತಾಹಿಕ ಸಂಪಾದಕೀಯ ಅಂಕಣದಲ್ಲಿ ಶಿವಸೇನೆ ಮುಖಂಡ ಸಂಜಯ್ ರಾವುತ್ ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪರಿಸ್ಥಿತಿಯನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಮೋದಿ ಇತ್ತೀಚೆಗೆ ಹೇಳಿದ್ದಾರೆ. ಆದರೆ ಅವರ ಪಕ್ಷದವರು ಇದನ್ನು ಭಿನ್ನವಾಗಿ ಅರ್ಥ ಮಾಡಿಕೊಂಡು ಇತರ ಪಕ್ಷಗಳ ಸರ್ಕಾರಗಳನ್ನು ಪತನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಕೊರೋನ ಸಾಂಕ್ರಾಮಿಕ ಅಥವಾ ನಿಸರ್ಗ ಚಂಡಮಾರುತದಿಂದ ಆಗಿರುವ ಹಾನಿಗಾಗಿ ಮಹಾರಾಷ್ಟ್ರಕ್ಕೆ ಕೇಂದ್ರದಿಂದ ಸೂಕ್ತ ನೆರವು ಸಿಕ್ಕಿಲ್ಲ. ಮಧ್ಯಪ್ರದೇಶದಲ್ಲಿ ಕಮಲ್ನಾಥ್ ಸರ್ಕಾರವನ್ನು ಬಿಜೆಪಿ ಬೀಳಿಸಿದೆ. ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನವನ್ನು ರಾಜಸ್ಥಾನದಲ್ಲಿ ಮಾಡುತ್ತಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕೋವಿಡ್-19 ನಿಂದಾಗಿ ಈ ಭರವಸೆ ಹುಸಿಯಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ನೆರವಾದ ಸಿಂಧ್ಯಾ ಹಾಗೂ ಅವರ ಬೆಂಬಲಿಗರ ಭವಿಷ್ಯಕ್ಕೆ ಕತ್ತಲು ಕವಿದಿದೆ” ಎಂದು ವಿವರಿಸಿದ್ದಾರೆ.
ಇದೀಗ ರಾಜ್ಯಸಭಾ ಚುನಾವಣೆಯನ್ನು ಅವಕಾಶವಾಗಿ ಬಳಸಿಕೊಂಡು ರಾಜಸ್ಥಾನ ಸರ್ಕಾರ ಬೀಳಿಸುವ ಪ್ರಯತ್ನ ನಡೆದಿದೆ. ಗುಜರಾತ್ನಲ್ಲೂ ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಂಡಿದೆ. ಇದು ದುರದೃಷ್ಟಕರ. ಮಹಾರಾಷ್ಟ್ರದಲ್ಲೂ ಇಂಥ ವಿಫಲ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ.
ಪ್ರತಿದಿನ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದರೂ, ಇದನ್ನು ಕಡಿಮೆ ಮಾಡುವ ಬದಲು ಬಿಜೆಪಿ, ಇತರ ಸರ್ಕಾರಗಳನ್ನು ಪತನ ಮಾಡುವಲ್ಲಿ ನಿರತವಾಗಿದೆ ಎಂದು ಸಂಪಾದಕೀಯ ಹೇಳಿದೆ.