ಮಾಡದ ರೈಲ್ವೆ ಪ್ರಯಾಣಕ್ಕೆ 6.5 ಕೋಟಿ ರೂ. ಪಡೆದ ರಾಜ್ಯಸಭಾ ಸದಸ್ಯರು !

ಹೊಸದಿಲ್ಲಿ, ಜೂ. 14 : 2019 ನೇ ಸಾಲಿನಲ್ಲಿ ಭಾರತೀಯ ರೈಲ್ವೆ ರಾಜ್ಯಸಭಾ ಸದಸ್ಯರು, ಅವರ ಪತಿ / ಪತ್ನಿ ಅಥವಾ ಸಹಾಯಕರ ಟಿಕೆಟ್ ಗಾಗಿ ಮಾಡಿದ ಬಿಲ್ ಮೊತ್ತ 7.8 ಕೋಟಿ ರೂ. ಆದರೆ ಇದರಲ್ಲಿ ವಿಶೇಷವೇನು ಗೊತ್ತೇ ? ಈ ಬೃಹತ್ ಮೊತ್ತದ ಕೇವಲ 15% ಮಾತ್ರ ನಿಜವಾಗಿ ಈ ರಾಜ್ಯಸಭಾ ಸದಸ್ಯರು ಪ್ರಯಾಣಿಸಿದ ಟಿಕೆಟ್ ನ ವೆಚ್ಚ. ಉಳಿದದ್ದು (6.5 ಕೋಟಿ ರೂ.) ಅವರು ರಾಜ್ಯಸಭೆಯಿಂದ ವಸೂಲಿ ಮಾಡಿಕೊಳ್ಳಲು ಕೇವಲ ಬುಕಿಂಗ್ ಮಾಡಿ ಪ್ರಯಾಣವೇ ಮಾಡದ ಟಿಕೆಟ್ ನ ಬಾಬ್ತು !
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದು ನಮ್ಮ ಚಿಂತಕರ ಚಾವಡಿ ಅಥವಾ ಮೇಲ್ಮನೆಯ ಸದಸ್ಯರ ಗೋಲ್ ಮಾಲ್ ಕತೆ !
ಉಪರಾಷ್ಟ್ರಪತಿ ಹಾಗು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರೇ ಆದೇಶಿಸಿ ತನಿಖೆ ನಡೆಸಿದಾಗ ಹೊರಬಿದ್ದ ಅವ್ಯವಹಾರದ ಒಂದು ಝಲಕ್ ಇದು. ಒಬ್ಬರು ಮಾಜಿ ರಾಜ್ಯಸಭಾ ಸದಸ್ಯರು ಜನವರಿ 2019 ರಲ್ಲಿ ದಿನಕ್ಕೆ ನಾಲ್ಕರಂತೆ ಒಟ್ಟು 63 ಟಿಕೆಟ್ ಬುಕಿಂಗ್ ಮಾಡಿದ್ದರು. ಅದರ ಒಟ್ಟು ಮೊತ್ತ 1.69 ಲಕ್ಷ ರೂ. ಆದರೆ ಅವರು ಪ್ರಯಾಣಿಸಿದ್ದು ಕೇವಲ 7 ಬಾರಿ ಮಾತ್ರ. ಅದರ ಮೊತ್ತ ಕೇವಲ ರೂ. 22,085. ಅಂದರೆ ರೂ. 1.47 ಲಕ್ಷ ರೂಪಾಯಿಯ ವಂಚನೆ. ಈ ಮೊತ್ತದ ಟಿಕೆಟ್ ಅನ್ನು ಅವರು ಬುಕ್ ಮಾಡಿ ಪ್ರಯಾಣಿಸಲೂ ಇಲ್ಲ, ಅದನ್ನು ರದ್ದು ಮಾಡಲೂ ಇಲ್ಲ. ಆದರೆ ಮೊತ್ತ ಮಾತ್ರ ಅವರ ಕಿಸೆ ತಲುಪಿತು !
ಈಗ ಈ ರೀತಿ ಬುಕಿಂಗ್ ಮಾಡಿ ರದ್ದು ಮಾಡದೆ ಪ್ರಯಾಣವನ್ನೂ ಮಾಡದೆ ಇದ್ದರೆ ಆ ಮೊತ್ತವನ್ನು ನಿಮ್ಮಿಂದಲೇ ವಸೂಲಿ ಮಾಡಲಾಗುವುದು ಎಂದು ರಾಜ್ಯಸಭೆ ತನ್ನ ಸದಸ್ಯರಿಗೆ ತಾಕೀತು ಮಾಡಿದೆ. ರಾಜ್ಯಸಭೆಯ ಕತೆ ಹೀಗಾದರೆ ಲೋಕಸಭೆಯಲ್ಲಿ ಕಳೆದ ವರ್ಷ ಒಟ್ಟು 23.4ಕೋಟಿ ರೂ. ರೈಲ್ವೆ ಟಿಕೆಟ್ ಬಿಲ್ ಬಂದಿದೆ. ಇದರಲ್ಲಿ ಎಷ್ಟು ಖೊಟ್ಟಿ ಬಿಲ್ ಇದೆ ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ಈಗ ನಮ್ಮ ಸಂಸದರ ಟಿಕೆಟ್ ಬುಕಿಂಗ್ ಮೇಲೆ ನಿಗಾ ಇಡುವುದಕ್ಕಾಗಿಯೇ ಹೊಸ ಸಾಫ್ಟ್ ವೆರ್ ಒಂದನ್ನು ತರಲು ರೈಲ್ವೆ ಯೋಚಿಸುತ್ತಿದೆ.
ಸಂಸದರಿಗೆ ರೈಲ್ವೆ ಮೂಲಕ ಪ್ರಯಾಣಿಸುವಾಗಲೆಲ್ಲಾ ಅವರಿಗೆ, ಅವರ ಪತಿ / ಪತ್ನಿಗೆ ಪ್ರಥಮ ದರ್ಜೆ, ಹವಾನಿಯಂತ್ರಿತ ಅಥವಾ ಎಕ್ಸಿಕೂಟಿವ್ ಟಿಕೆಟ್ ಉಚಿತವಿದೆ. ಜೊತೆಗೆ ಪ್ರಯಾಣಿಸುವ ಒಬ್ಬರಿಗೆ ಹವಾನಿಯಂತ್ರಿತ, ಟೂ ಟಯರ್ ಟಿಕೆಟ್ ಉಚಿತವಿದೆ.