ಮುಂದಿನ 24 ಗಂಟೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಜೂ.14: ರಾಜ್ಯದಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಪ್ರಬಲವಾಗದಿದ್ದರೂ ಮುಂದಿನ 24 ಗಂಟೆಯೊಳಗೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ.
ಈ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬಿರುಸಿನ ಗಾಳಿಯೊಂದಿಗೆ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು, ಘಟ್ಟಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ನಿಸರ್ಗ ಚಂಡಮಾರುತದ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಮುಂಗಾರು ಕರಾವಳಿಗೆ ಪ್ರವೇಶವಾಗಿತ್ತು. ಆದರೆ, ನಿರೀಕ್ಷೆಯಂತೆ ಇನ್ನೂ ಮಳೆ ಪ್ರಬಲವಾಗಿಲ್ಲ. ಮಳೆಗಿಂತ ಗಾಳಿಯ ಪ್ರಮಾಣವೇ ಹೆಚ್ಚಾಗಿದೆ. ಇದರಿಂದ ಸಮುದ್ರದ ಅಲೆಗಳು ದಂಡೆಗೆ ಅಪ್ಪಳಿಸುತ್ತಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕರಾವಳಿಯಲ್ಲಿ ಭಾರೀ ಮಳೆ ಬಂದರೆ ಒಳನಾಡಿನಲ್ಲಿ ಸಾಧಾರಣ ಇಲ್ಲವೇ ತುಂತುರು ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳೂ ಇವೆ ಎಂದು ತಿಳಿಸಿದೆ.
Next Story





