ಉಡುಪಿ: ಇಂದು 20 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢ
ಆಸ್ಪತ್ರೆಯಿಂದ ಬಿಡುಗಡೆಯಾದವರು 789, ಚಿಕಿತ್ಸೆಯಲ್ಲಿ 235 ಮಂದಿ

ಉಡುಪಿ, ಜೂ.14: ಉಡುಪಿಯಲ್ಲಿ ರವಿವಾರ ಹೊಸದಾಗಿ 20 ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿತರು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ 1025 ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಸೋಂಕು ಪತ್ತೆಯಾದವರಲ್ಲಿ 14 ಮಂದಿ ಪುರುಷರು, ಐವರು ಮಹಿಳೆಯರು ಹಾಗೂ ನಾಲ್ಕು ವರ್ಷ ಪ್ರಾಯದ ಗಂಡು ಮಗು ಸೇರಿದೆ. ಇವರಲ್ಲಿ 17 ಮಂದಿ ಮುಂಬೈ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಬಂದರೆ ಒಬ್ಬರು ತಮಿಳುನಾಡಿನಿಂದ ಬಂದವರು, ಒಬ್ಬರು ಉತ್ತರ ಪ್ರದೇಶದಿಂದ ಬಂದವರು ಹಾಗೂ ಒಬ್ಬರು ಸ್ಥಳೀಯವಾಗಿ ಸಂಪರ್ಕಕ್ಕೆ ಬಂದವರಾಗಿದ್ದಾರೆ.
ಇವರು ಮಹಾರಾಷ್ಟ್ರದಿಂದ ಬಂದು ಜೂ.8ರಂದು ಕೊರೋನಕ್ಕೆ ಪಾಸಿಟಿವ್ ಆದ 51 ವರ್ಷ ಪ್ರಾಯದ ಪುರುಷರ ಸಂಪರ್ಕಕ್ಕೆ ಬಂದ 53 ವರ್ಷ ಪ್ರಾಯದ ಪುರುಷರಾಗಿದ್ದಾರೆ ಎಂದು ಡಾ. ಸೂಡ ತಿಳಿಸಿದರು. ಇಂದು ಕುಂದಾಪುರ ತಾಲೂಕಿನ 15 ಮಂದಿ, ಉಡುಪಿಯ ಮೂವರು ಹಾಗೂ ಕಾರ್ಕಳದ ಇಬ್ಬರು ಪಾಸಿಟಿವ್ ಬಂದಿದ್ದಾರೆ.
ಮತ್ತೆ 69 ಮಂದಿ ಬಿಡುಗೆ: ಉಡುಪಿ ಜಿಲ್ಲೆ ಸೋಂಕಿತರ ಸಂಖ್ಯೆಯಲ್ಲಿ ಈಗಲೂ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದಲ್ಲಿದ್ದರೂ, ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ಬಂದವರಲ್ಲಿ ಶೇ.77ರಷ್ಟು ಮಂದಿ ಈಗಾಗಲೇ ಚಿಕಿತ್ಸೆಯಿಂದ ಗುಣಮುಖರಾಗಿ ಸೋಂಕಿನಿಂದ ವಿಮುಕ್ತಿ ಪಡೆದು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.
ಇಂದು ಸಂಜೆಯವರೆಗೆ ಒಟ್ಟು 69 ಮಂದಿ ಬಿಡುಗಡೆಯಾಗಿದ್ದು, ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 789 ಮಂದಿ ಕೋವಿಡ್-19ರ ಸೋಂಕಿನಿಂದ ಸಂಪೂರ್ಣವನಾಗಿ ಚೇತರಿಸಿಕೊಂಡು ಉಡುಪಿ, ಕುಂದಾಪುರ, ಕೊಲ್ಲೂರು ಹಾಗೂ ಕಾರ್ಕಳ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ತಿಳಿಸಿದರು. ಈ ಮೂಲಕ ವಿವಿಧ ಆಸ್ಪತ್ರೆಗಳಲ್ಲಿ ಈಗ ಚಿಕಿತ್ಸೆಯಲ್ಲಿರುವವರು ಒಟ್ಟು 235 ಮಂದಿ ಮಾತ್ರ ಎಂದು ಡಾ.ಸುಧೀರ್‌ಚಂದ್ರ ಸೂಡ ಮಾಹಿತಿ ನೀಡಿದರು.
44 ಮಂದಿಯ ಸ್ಯಾಂಪಲ್ ನೆಗೆಟಿವ್: ಪ್ರಯೋಗಾಲಯದ ಪರೀಕ್ಷೆ ಯಲ್ಲಿ ಇಂದು 20 ಮಂದಿಯ ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿದ್ದರೆ, 44 ಮಂದಿಯ ವರದಿ ನೆಗೆಟಿವ್ ಆಗಿ ಬಂದಿವೆ ಎಂದು ಡಾ.ಸೂಡ ತಿಳಿಸಿದ್ದಾರೆ. ಇದರೊಂದಿಗೆ ಇಂದು ಕೋವಿಡ್-19ರ ಗುಣಲಕ್ಷಣವಿರುವ 77 ಮಂದಿಯ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವರಲ್ಲಿ ಕೋವಿಡ್ ಶಂಕಿತರು ಐವರಾದರೆ, ನಾಲ್ವರು ಕೋವಿಡ್ ಸಂಪರ್ಕಿತರು. ಇನ್ನು ಮೂವರು ಉಸಿರಾಟದ ತೊಂದರೆಯಿಂದ, 9 ಮಂದಿ ಶೀತಜ್ವರದಿಂದ ಬಳಲುವವರು. ಅಲ್ಲದೇ 56 ಮಂದಿ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದವರ ಮಾದರಿಗಳನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ವಿವರಿಸಿದರು.
ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 12,907ಕ್ಕೇರಿದೆ. ಇವುಗಳಲ್ಲಿ ಇಂದು ಸಂಜೆಯವರೆಗೆ ಒಟ್ಟು 11,778 ನೆಗೆಟಿವ್ ಆಗಿ ಬಂದರೆ, 1025 ಸ್ಯಾಂಪಲ್ ಪಾಸಿಟಿವ್ ಬಂದಿವೆ. ಹೀಗಾಗಿ ಇನ್ನು 103 ಸ್ಯಾಂಪಲ್‌ಗಳ ವರದಿ ಇನ್ನಷ್ಟೇ ಬರಬೇಕಿದೆ ಎಂದವರು ಹೇಳಿದರು.
ಐಸೋಲೇಷನ್ ವಾರ್ಡಿಗೆ 9 ಮಂದಿ: ಇಂದು ರೋಗದ ಲಕ್ಷಣ ದೊಂದಿಗೆ ಐವರು ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿ ಒಟ್ಟು 9 ಮಂದಿ ಐಸೋಲೇಷನ್ ವಾರ್ಡ್‌ಗಳಿಗೆ ದಾಖಲಾಗಿದ್ದಾರೆ. ಇವರಲ್ಲಿ ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆಯವರು 6 ಮಂದಿ ಹಾಗೂ ಶೀತಜ್ವರದಿಂದ ಬಾಧಿತರಾದ ಇಬ್ಬರು ಸೇರಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 5 ಮಂದಿ ಬಿಡುಗಡೆಗೊಂಡಿದ್ದು, 79 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 17ಮಂದಿ ಸೇರಿದಂತೆ ಒಟ್ಟು 5398 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4769 ಮಂದಿ 28 ದಿನಗಳ ಹಾಗೂ 4856 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ. ಜಿಲ್ಲೆಯಲ್ಲಿ ಈಗ 475 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ಹೇಳಿದರು.







