ಕೊರೋನ ನಡುವೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ !
ಇಲ್ಲಿವೆ ವಿವಿಧ ರೋಗಗಳ ಲಕ್ಷಣಗಳು

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.14: ಇಡೀ ವಿಶ್ವವೇ ಕೊರೋನ ಮಹಾಮಾರಿಯಿಂದ ಭಾಗಶಃ ನಲುಗಿ ಹೋಗಿದೆ. ಇದರ ನಡುವೆ ಕರ್ನಾಟಕದಲ್ಲಿ ಮಳೆಗಾಲದ ಆರಂಭದ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿಯೂ ಆರಂಭಗೊಂಡಿದ್ದು, ಸರಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದಲ್ಲಿ ಕೊರೋನ ಮಹಾಮಾರಿ ಏಳು ಸಾವಿರದ ಗಡಿಯನ್ನು ದಾಟಿದೆ. ಇದುವರೆಗೂ 86 ಮಂದಿ ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೊರೋನ ರೀತಿಯ ಮಾದರಿಯ ರೋಗ ಲಕ್ಷಣಗಳನ್ನು ಹೊಂದಿರುವ ಎಚ್1ಎನ್1 ಗೆ ಮೂವರು ಬಲಿಯಾಗಿದ್ದಾರೆ.
ಮಳೆಗಾಲದಲ್ಲಿ ಎಲ್ಲೆಡೆ ಸೊಳ್ಳೆಗಳು ಅಧಿಕ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ. ಈಗಾಗಲೇ ಮುಂಗಾರು ಆರಂಭಗೊಂಡಿದ್ದು, ಎಲ್ಲೆಡೆ ಮಳೆ ಸುರಿಯಲಾರಂಭಿಸಿದೆ. ಸೊಳ್ಳೆಗಳಿಂದ ಹರಡುವ ಡೆಂಗ್, ಚಿಕನ್ ಗುನ್ಯ, ಮಲೇರಿಯಾ, ಮಿದುಳು ಜ್ವರಗಳು ಅಧಿಕವಾಗುವ ಲಕ್ಷಣಗಳಿವೆ. ಇದೇ ವೇಳೆ ಕೊರೋನ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಜನರ ನಿರ್ಲಕ್ಷ್ಯ: ಕೊರೋನ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಾಕ್ಡೌನ್ ವಿಧಿಸಿದ್ದ ಸಂದರ್ಭದಲ್ಲಿ ಸೋಂಕು ಹಾಗೂ ರೋಗಗಳು ನಿಯಂತ್ರಣದಲ್ಲಿದ್ದವು. ಆದರೆ, ಲಾಕ್ಡೌನ್ ತೆರವುಗೊಳಿಸಿದ ಬಳಿಕ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ಮತ್ತೊಂದು ಕಡೆ ಬೇರೆ ರೋಗಗಳ ಸಂಖ್ಯೆಯೂ ಅಧಿಕವಾಗುತ್ತಿದೆ.
ಆರೋಗ್ಯ ಇಲಾಖೆ ಹಾಗೂ ಸರಕಾರದ ನಿಯಮಗಳನ್ನು ಪಾಲಿಸಲು ಜನರು ನಿರಾಸಕ್ತಿ ತೋರುತ್ತಿರುವುದು ವರದಿಯಾಗುತ್ತಲೇ ಇದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಬಗ್ಗೆ ಗಮನ ಹರಿಸಿಲ್ಲ. ಅಲ್ಲದೆ, ಮುಖ್ಯವಾಗಿ ಸ್ವಚ್ಛತೆಯ ಬಗ್ಗೆಯೂ ಜನರು ಗಮನ ನೀಡುತ್ತಿಲ್ಲ. ಇದರಿಂದಾಗಿ ಸೋಂಕು ವೇಗವಾಗಿ ಹರಡಲು ಸಾಧ್ಯವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕೊರೋನ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಅಪಾರ ಪ್ರಮಾಣದಲ್ಲಿ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಇದರಿಂದ ಕೊರೋನ ಹೊರತಾದ ಆರೋಗ್ಯ ಸಮಸ್ಯೆಗಳಿಗೆ ಈಗಾಗಲೇ ಸೂಕ್ತ ಚಿಕಿತ್ಸೆ ದೊರೆಯದೇ ರೋಗಿಗಳು ಪರದಾಡುತ್ತಿರುವುದು ವರದಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡರೆ ಗತಿಯೇನು ಎಂಬುದು ಪ್ರಶ್ನೆಯಾಗಿದೆ.
ಜನರಲ್ಲಿ ಆತಂಕ ಸೃಷ್ಟಿ: ಇದುವರೆಗೂ ರಾಜ್ಯದಲ್ಲಿ ಡೆಂಗ್, ಚಿಕನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ, ಫೈಲೇರಿಯಾ ಪ್ರಕರಣಗಳು ವರದಿಯಾಗಿವೆ. ಫೈಲೇರಿಯಾ ಹೊರತುಪಡಿಸಿ ಉಳಿದ ಎಲ್ಲವೂ ಜ್ವರಗಳ ರೋಗ ಲಕ್ಷಣಗಳಲ್ಲಿ ಸಾಮ್ಯತೆ ಇದ್ದು, ಇದರಿಂದಾಗಿ ನೆಗಡಿ, ತಲೆನೋವು, ಮೈ-ಕೈ ನೋವು ಕಾಣಿಸಿಕೊಂಡರೂ ಯಾವ ರೋಗ ಇರಬಹುದು ಎಂದು ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಇವುಗಳ ಜತೆಗೆ ಗಾಳಿಯಿಂದ ಹರಡಬಹುದಾದ ಎಚ್1ಎನ್1 ಪ್ರಕರಣಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ.
ಸಾಂಕ್ರಾಮಿಕ ರೋಗಗಳು ಒಂದು ಕಡೆ ಜನರಲ್ಲಿ ಭಯವನ್ನು ಉಂಟು ಮಾಡಿದ್ದರೆ, ವೈದ್ಯರಿಗೆ ಗೊಂದಲವನ್ನು ಸೃಷ್ಟಿಸುತ್ತಿವೆ. ಬಹುತೇಕ ರೋಗ ಲಕ್ಷಣಗಳು ಒಂದೇ ಇರುವ ಕಾರಣ ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ಅರಿತು ಚಿಕಿತ್ಸೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪ್ರತಿಯೊಬ್ಬ ರೋಗಿಯ ಮಾದರಿ ಆರೋಗ್ಯಾಲಯದಲ್ಲಿ ಪರೀಕ್ಷೆ ಮಾಡಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.
ರೋಗ ಹಾಗೂ ರೋಗಗಳ ಲಕ್ಷಣಗಳು
ವೈರಲ್ ಫೀವರ್: ನೆಗೆಡಿ, ತಲೆನೋವು, ಕೆಮ್ಮು, ಮೈ-ಕೈ ನೋವಿನೊಂದಿಗೆ ಜ್ವರ ಸಾಮಾನ್ಯ ವೈರಲ್ ಫೀವರ್ ನ ಲಕ್ಷಣ. ಕೆಲವೊಮ್ಮೆ ವಾಂತಿ-ಭೇದಿಯೂ ಕಾಣಿಸಿಕೊಳ್ಳುತ್ತದೆ.
ಡೆಂಗ್: ಒಂದು ಬಾರಿ ಡೆಂಗ್ ಬಂದರೆ ಗುಣಮುಖವಾಗುತ್ತದೆ. ಆದರೆ, ಎರಡು-ಮೂರು ಬಾರಿ ಬಂದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ. ಧಿಡೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ-ಕೈ ನೋವು, ಅತಿಸಾರ ಆರಂಭದ ಲಕ್ಷಣಗಳು. ಗಂಭೀರ ಹಂತ ತಲುಪಿದ ವೇಳೆ ಕರುಳಿನಲ್ಲಿ ರಕ್ತಸ್ರಾವ, ಮೈ ಮೇಲೆ ಕೆಂಪು ಬರೆ ಕಾಣಿಸಿಕೊಳ್ಳುತ್ತವೆ.
ಚಿಕನ್ ಗುನ್ಯಾ: ವಿಪರೀತ ಮೈ-ಕೈ ನೋವು, ಸಿಡಿತ ಮಂಡಿ, ಮೊಣಕೈ, ಮುಂಗೈಗಳಲ್ಲಿ ತೀವ್ರತರವಾದ ನೋವು ಕಾಣಿಸಿಕೊಳ್ಳುತ್ತದೆ.
ಎಚ್1ಎನ್1: ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರದ ಜತೆಗೆ ಉಸಿರಾಟದ ತೊಂದರೆ, ಕಣ್ಣು ಕೆಂಪಾಗುವುದು, ತೀವ್ರವಾದ ಮೈ-ಕೈ ನೋವು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ.
ಮಿದುಳು ಜ್ವರ: ಸಾಮಾನ್ಯವಾಗಿ ಜ್ವರ, ತಲೆನೋವು, ವಾಂತಿ, ಕತ್ತುಗಡು ಸಾಗುವುದು, ಜೋಂಪು ಹತ್ತುವುದು, ಗಂಭೀರ ಹಂತದಲ್ಲಿ 103 ಡಿಗ್ರಿ ಫ್ಯಾರನ್ ಹೀಟ್ಗಿಂತ ಅಧಿಕಜ್ವರ, ಗೊಂದಲ, ಭ್ರಮಾತ್ಮಕ ಸ್ಥಿತಿ, ಜೋಂಪು, ಚಲನೆಯಲ್ಲಿ ನಿಧಾನ, ದೇಹ ತಟಸ್ಥವಾಗುವಿಕೆ, ಕಿರಿಕಿರಿ, ಬೆಳಕನ್ನು ನೋಡಲಾಗದಿರುವಿಕೆ, ಮೂರ್ಛೆ, ಕೋಮಾರೋಗ ಲಕ್ಷಣಗಳಾಗಿವೆ.







