ಜೂ.15ರಿಂದ ಮೀನುಗಾರಿಕೆ ನಿಷೇಧ : ಅವಧಿಗೆ ಮುನ್ನ ಲಂಗರು ಹಾಕಿದ ಬೋಟುಗಳು

ಉಡುಪಿ, ಜೂ.14: ಚಂಡಮಾರುತ ಮತ್ತು ಕೊರೋನ ಭೀತಿಯಿಂದ ಮಲ್ಪೆಯ ಬೋಟುಗಳು ಸರಕಾರ ವಿಸ್ತರಿಸಿದ ಜೂ.15ರ ಅವಧಿಗೆ ಮುನ್ನವೇ ವಿವಿಧ ಬಂದರುಗಳಲ್ಲಿ ಲಂಗರು ಹಾಕಿವೆ.
ಈ ಬಾರಿ ಜೂ.1ರ ಬದಲು ಜೂ.15ರಿಂದ ಆ.1ರವರೆಗೆ ಮೀನುಗಾರಿಕೆ ನಿಷೇಧ ಅವಧಿಯನ್ನು ಸರಕಾರ ಪರಿಷ್ಕರಿಸಿ ಆದೇಶ ನೀಡಿತ್ತು. ಆದರೆ ಹವಾಮಾನದ ವೈಪರೀತ್ಯ ಹಾಗೂ ಜಿಲ್ಲೆಯ ಕೊರೋನ ಮಹಾಸ್ಪೋಟದ ಭೀತಿ ಯಿಂದ ಮಲ್ಪೆ ಮೀನುಗಾರರ ಸಂಘ ಮೇ 31ಕ್ಕೆ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿತ್ತು.
ಆದರೆ ಆ ಸಮಯದಲ್ಲಿ ಸುಮಾರು 200 ಬೋಟುಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿದಿನ 30-40 ಬೋಟುಗಳಂತೆ ಜೂ.7ಕ್ಕೆ ಎಲ್ಲ ಬೋಟುಗಳು ಬಂದರಿಗೆ ಆಗಮಿಸಿ ಲಂಗರು ಹಾಕಿವೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತಿಲ್ಲ. ಮಲ್ಪೆಯಲ್ಲಿ ಸುಮಾರು 1500 ಬೋಟುಗಳು ಹಾಗೂ ಉಳಿದ 400 ಬೋಟುಗಳು ಕೋಡಿಕನ್ಯಾನ, ಗಂಗೊಳ್ಳಿ, ಭಟ್ಕಳ ಬಂದರುಗಳಲ್ಲಿ ಲಂಗಾರು ಹಾಕಿವೆ.
ಇನ್ನು ನಾಡದೋಣಿ ಮೀನುಗಾರರು ಮಳೆಗಾಲದ ಮೀನುಗಾರಿಕೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಬೆಣ್ಣೆಕುದ್ರು ದೇವಳ ದಲ್ಲಿ ನಡೆಯುವ ಪೂಜೆಯ ಬಳಿಕ ನಾಡದೋಣಿಯವರು ಮೀನುಗಾರಿಕೆ ನಡೆಸಬಹುದು ಎಂದು ಸಂಘದ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.





