ನೂರಾರು ಕಾರ್ಯಕರ್ತರ ಜೊತೆ ಸುರಕ್ಷಿತ ಅಂತರ ಮರೆತ ಬಿಜೆಪಿ ಮುಖಂಡ
Photo: facebook.com/Govindsinghrajput
ಭೋಪಾಲ, ಜೂ.14: ಬಿಜೆಪಿ ಮುಖಂಡ , ಮಧ್ಯಪ್ರದೇಶದ ಸಚಿವ ಗೋವಿಂದ್ ಸಿಂಗ್ ರಜಪೂತ್ ಸುರಕ್ಷಿತ ಅಂತರ ಮಾರ್ಗಸೂಚಿಯನ್ನು ಉಲ್ಲಂಘಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಹತ್ಗಢ ನಗರದ ಸಭಾಂಗಣವೊಂದರಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಕಾರ್ಯಕರ್ತರನ್ನುದ್ದೇಶಿಸಿ ಸಚಿವರು ಮಾತನಾಡುತ್ತಿರುವ ವೀಡಿಯೊ ಕೂಡಾ ವೈರಲ್ ಆಗಿದೆ. ಸಭೆಯಲ್ಲಿದ್ದ ಬಹುತೇಕ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ಬಳಿಕ ಕಾರ್ಯಕರ್ತರ ತಂಡ ಘೋಷಣೆ ಕೂಗುತ್ತಾ ಸಚಿವರನ್ನು ಸುತ್ತುವರಿದಿದ್ದು , ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಪಾಲಿಸಬೇಕೆಂಬ ನಿಯಮವನ್ನು ಆಡಳಿತ ಪಕ್ಷದ ಮುಖಂಡರೇ ತಿರಸ್ಕರಿಸಿದಂತಾಗಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾಗಿರುವ ಗೋವಿಂದ್ ಸಿಂಗ್, ಸಿಂಧಿಯಾರೊಂದಿಗೇ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಸುರ್ಖಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯಾಗಿರುವ ಸಿಂಗ್ ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿ ಬೆಂಬಲಿಗರನ್ನು ಭೇಟಿಮಾಡಿದ ಸಂದರ್ಭ ಈ ಘಟನೆ ನಡೆದಿದೆ.
ಸುರಕ್ಷಿತ ಅಂತರ ನಿಯಮ ಪಾಲಿಸದ ಮತ್ತೋರ್ವ ಬಿಜೆಪಿ ಮುಖಂಡನ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹುಟ್ಟುಹಬ್ಬ ಪ್ರಯುಕ್ತ ಇಂದೋರ್ನಲ್ಲಿ ನಡೆದ ಉಚಿತ ಪಡಿತರ ವಿತರಣಾ ಕಾರ್ಯಕ್ರಮದಲ್ಲಿ ಬೃಹತ್ ಜನರು ಸೇರಿದ್ದರು ಮತ್ತು ಇಲ್ಲಿಯೂ ಸುರಕ್ಷಿತ ಅಂತರ ನಿಯಮವನ್ನು ಪಾಲಿಸಿರಲಿಲ್ಲ.