ಜಾನುವಾರು ವ್ಯಾಪಾರಿಗೆ ಹಲ್ಲೆ ಪ್ರಕರಣ : ಆರು ಮಂದಿ ಆರೋಪಿಗಳು ಸೆರೆ

ಮಂಗಳೂರು, ಜೂ.14: ಜೋಕಟ್ಟೆಯಿಂದ ಕುದ್ರೋಳಿಯ ಕಸಾಯಿಖಾನೆಗೆ ಎಮ್ಮೆ ಸಾಗಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಸಂಘಪರಿವಾರ ಕಾರ್ಯಕರ್ತರು ವಾಹನಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ರವಿವಾರ ನಡೆದಿದ್ದು, ಘಟನೆಗೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಟಿಪಳ್ಳ ನಿವಾಸಿಗಳಾದ ಪ್ರೀತಮ್ (29), ಶ್ರೀನಾಥ್ ದೇವಾಡಿಗ (21), ಆಶಿತ್ (24), ಶಕ್ತಿನಗರ ನಿವಾಸಿಗಳಾದ ಭವಿತ್ ಶೆಟ್ಟಿ (22), ಜಯಪ್ರಶಾಂತ್ (26), ಸುರತ್ಕಲ್ ನಿವಾಸಿ ಸಚಿನ್ (26) ಎಂದು ಗುರುತಿಸಲಾಗಿದ್ದು, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಕಟ್ಟೆ ನಿವಾಸಿ ಮುಹಮ್ಮದ್ ಹನೀಫ್ (34) ಹಲ್ಲೆಗೊಳಗಾದವರು. ಜೋಕಟ್ಟೆಯಿಂದ ಎಮ್ಮೆಗಳನ್ನು ತುಂಬಿಸಿಕೊಂಡು ಮಂಗಳೂರಿಗೆ ತೆರಳುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ವ್ಯಾಪಾರಿಯನ್ನು ವಾಹನಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದರು. ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದವರು ಸಂಘಪರಿವಾರದ ಕಾರ್ಯಕರ್ತರು ಎಂದು ತಿಳಿದುಬಂದಿದೆ.
ಹನೀಫ್ ವಿರುದ್ಧ ಕೇಸು ದಾಖಲಿಸಿದ ಪೊಲೀಸರು ನಂತರ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ಹಾಗೂ ಕೊವೀಡ್ ಪರೀಕ್ಷೆಗೆ ಒಳಪಡಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ. ಜೂ.19ರಂದು ಮತ್ತೆ ಹಾಜರಾಗಲು ನ್ಯಾಯಾಧೀಶರು ವ್ಯಾಪಾರಿಗೆ ಸೂಚಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ದಾಖಲೆ ಕೊಟ್ಟರೂ ನನ್ನ ವಿರುದ್ಧ ಪ್ರಕರಣ ದಾಖಲು’
‘ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕೃಷಿ ಮಾರುಕಟ್ಟೆಯಲ್ಲಿ ಜೂ.13ರಂದು 10 ಎಮ್ಮೆಗಳನ್ನು ಖರೀದಿಸಿ ತಂದಿದ್ದೆ. ಈ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳಿಂದ ‘ಪ್ರಾಣಿ ಆರೋಗ್ಯ ಪ್ರಮಾಣಪತ್ರ’ವನ್ನು ಪಡೆದುಕೊಂಡಿದ್ದೇನೆ’ ಎಂದು ಹಲ್ಲೆಗೊಳಗಾದ ಹನೀಫ್ ತಿಳಿಸಿದ್ದಾರೆ.
‘ಖರೀದಿಸಿದ 10 ಎಮ್ಮೆಗಳ ಪೈಕಿ 6ನ್ನು ಬೇರೆ ವಾಹನದಲ್ಲಿ ತುಂಬಿಸಿ ಕಳಿಸಿದ್ದೆ. ಇನ್ನುಳಿದ ನಾಲ್ಕು ಎಮ್ಮೆಗಳನ್ನು ನನ್ನ ಸಹೋದರನ ವಾಹನದಲ್ಲಿ ತುಂಬಿಕೊಂಡು ರವಿವಾರ ನಸುಕಿನ ಜಾವ 4 ಗಂಟೆಗೆ ಜೋಕಟ್ಟೆಯ ಮನೆಗೆ ವಾಪಸಾದೆ. ಕೆಲಹೊತ್ತು ವಿಶ್ರಾಂತಿ ಪಡೆದು 5 ಗಂಟೆಗೆ ಮಂಗಳೂರಿಗೆ ತೆರಳುವಾಗ ಘಟನೆ ನಡೆಯಿತು. ಎಮ್ಮೆ ಖರೀದಿಯ ಬಗ್ಗೆ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ಕೊಟ್ಟರೂ ಕೇಸು ದಾಖಲು ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಜಾನುವಾರು ವ್ಯಾಪಾರಿಯ ಥಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವ್ಯಾಪಾರಿ ಹಾಗೂ ಹಲ್ಲೆ ನಡೆಸಿದವರು ವಿರುದ್ಧದ ತನಿಖೆ ಮುಂದುವರಿದಿದೆ.
- ಮುಹಮ್ಮದ್ ಶರೀಫ್, ಇನ್‌ಸ್ಪೆಕ್ಟರ್, ಉರ್ವ ಪೊಲೀಸ್ ಠಾಣೆ







