ಮಾವೋವಾದಿ ನಾಯಕನಿಗೆ ನೆರವು ನೀಡುತ್ತಿದ್ದ ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ

ಛತ್ತೀಸ್ ಗಢ: ಮಾವೋವಾದಿಗಳಿಗೆ ನೆರವು ನೀಡಿದ ಆರೋಪದಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಛತ್ತೀಸ್ ಗಢದ ದಾಂತೇವಾಡದಲ್ಲಿ ನಡೆದಿದೆ.
ಬಂಧಿತ ಬಿಜೆಪಿ ನಾಯಕನನ್ನು ಜಗತ್ ಪೂಜಾರಿ ಎಂದು ಗುರುತಿಸಲಾಗಿದೆ. ಈತ ಮಾವೋವಾದಿಗಳಿಗೆ ಸರಕು ಮತ್ತು ಇನ್ನಿತರ ಸಾಮಗ್ರಿಗಳನ್ನು ಒಂದು ದಶಕದಿಂದೀಚೆಗೆ ತಲುಪಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಾವೋವಾದಿ ನಾಯಕ ಅಜಯ್ ಅಲಾಮಿಗಾಗಿ ಟ್ರ್ಯಾಕ್ಟರ್ ಖರೀದಿಸಿದ ಆರೋಪದಲ್ಲಿ ಈ ಬಂಧನ ನಡೆಸಲಾಗಿದೆ. ಅಜಯ್ ಬಗ್ಗೆ ಮಾಹಿತಿ ನೀಡುವವರಿಗೆ ಈಗಾಗಲೇ ಪೊಲೀಸರು 5 ಲಕ್ಷ ಬಹುಮಾನ ಘೋಷಿಸಿದ್ದಾರೆ.
“ಕೆಲವು ತಿಂಗಳುಗಳಿಂದೀಚೆಗೆ ನಾವು ಮಾವೋವಾದಿ ನಾಯಕರ ಕರೆಗಳನ್ನು ಪರಿಶೀಲಿಸುತ್ತಿದ್ದೇವೆ. ಅಲಾಮಿಗೆ ಇತ್ತೀಚೆಗೆ ಪೂಜಾರಿ ಹಲವು ಬಾರಿ ಸರಕುಗಳನ್ನು ತಲುಪಿಸುವುದಕ್ಕಾಗಿ ಕರೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇತ್ತೀಚೆಗಷ್ಟೇ ಅಲಾಮಿ ಟ್ರ್ಯಾಕ್ಟರ್ ಬೇಕೆಂದು ಪೂಜಾರಿ ಬಳಿ ಕೇಳಿದ್ದ” ಎಂದು ಪೊಲೀಸ್ ಅಧಿಕಾರಿ ಅಭಿಶೇಕ್ ಪಲ್ಲವ್ ಮಾಹಿತಿ ನೀಡಿದ್ದಾರೆ.





