ಕಣ್ಣಿನಿಂದಲೂ ಹರಡುತ್ತೆ ಕೊರೋನ ವೈರಸ್: ಬೆಂಗಳೂರಿನ ಮಿಂಟೋ ಆಸ್ಪತ್ರೆ ವರದಿ

ಬೆಂಗಳೂರು, ಜೂ.14: ಕೊರೋನ ಸೋಂಕು ಯಾವ ರೀತಿ ಹರಡುತ್ತದೆ ಎಂಬುದನ್ನು ಊಹಿಸಲೂ ಆಗುತ್ತಿಲ್ಲ. ಕಣ್ಣಿನಿಂದಲೂ ಕೊರೋನ ಸೋಂಕು ಹರಡುತ್ತದೆ ಎಂಬ ಅಂಶ ಮಿಂಟೋ ಆಸ್ಪತ್ರೆ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.
ಕೊರೋನ ಸೋಂಕು ಹೇಗೆ ಹರಡುತ್ತದೆ ಎಂಬ ಬಗ್ಗೆ ಆರೋಗ್ಯ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಆದರೆ, ಮಿಂಟೋ ಕಣ್ಣಿನ ಆಸ್ಪತ್ರೆ ಮೊದಲ ಬಾರಿಗೆ ಅಧ್ಯಯನ ನಡೆಸಿದ್ದು ಇದರಲ್ಲಿ ಕೊರೋನ ರೋಗಿಗಳ ಕಣ್ಣೀರಿನಲ್ಲಿ ವೈರಸ್ ಇರುವುದು ಪತ್ತೆಯಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ 45 ಕೊರೋನ ಪಾಸಿಟಿವ್ ರೋಗಿಗಳ ಕಣ್ಣೀರನ್ನು ಅಧ್ಯಯನಕ್ಕೆ ಒಳಪಡಿಸಿರುವ ತಜ್ಞರ ತಂಡ, ರೋಗ ಲಕ್ಷಣ ಇಲ್ಲದ ಒಬ್ಬ ರೋಗಿಯ ಕಣ್ಣಿನ ದ್ರವದಲ್ಲಿ ವೈರಸ್ ಇರುವುದು ಪತ್ತೆ ಹಚ್ಚಿದ್ದಾರೆ. ಕಣ್ಣಿನ ದ್ರವದಲ್ಲಿ ವೈರಸ್ ಪತ್ತೆಯಾದವರು ಕಣ್ಣನ್ನು ಮುಟ್ಟಿ ಯಾವುದಾದರೂ ವಸ್ತುಗಳನ್ನು ಮುಟ್ಟಿದರೆ ವೈರಸ್ ಅಂಟಿಕೊಳ್ಳುತ್ತದೆ. ಆ ವಸ್ತುಗಳನ್ನು ಇತರರು ಸ್ಪರ್ಶಿಸಿದರೆ ಕೊರೋನ ತಗಲುವ ಸಾಧ್ಯತೆಯಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಕಣ್ಣೀರಿನಲ್ಲಿ ಕೊರೋನ ಸೋಂಕು ಇರುವುದು ಪತ್ತೆಯಾಗಿರುವುದು ಮಾತ್ರವಲ್ಲದೆ, ಕಣ್ಣಿನ ವೈದ್ಯರಿಗೂ ಇದರಿಂದ ಅಪಾಯ ಎದುರಾಗಿದ್ದು, ಇನ್ನು ಮುಂದೆ ಕಣ್ಣಿನ ತಪಾಸಣೆ ಮಾಡುವ ವೈದ್ಯರು ಹಾಗೂ ನೇತ್ರ ತಪಾಸಣೆ ಮಾಡುವ ಇತರೆ ಸಿಬ್ಬಂದಿ ಕೂಡಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ತಿಳಿಸಲಾಗಿದೆ.





