ಕೆಆರ್ಎಸ್ ಬಳಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣದ ಬಗ್ಗೆ 3 ದಿನಗಳಲ್ಲಿ ತೀರ್ಮಾನ: ಸಚಿವ ನಾರಾಯಣಗೌಡ

ಮೈಸೂರು,ಜೂ.14: ಕೆಆರ್ಎಸ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದ ಬಳಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡಬೇಕೆ ಬೇಡವೇ ಎಂಬ ಕುರಿತು ಇನ್ನು ಎರಡು ಮೂರು ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಈ ನಾಡಿನ ಕಣ್ಮಣಿ, ಅಪಾರ ಸೇವೆಯನ್ನು ಈ ನಾಡಿಗೆ ಸಲ್ಲಿಸಿದ್ದಾರೆ. ಅವರ ಪ್ರತಿಮೆ ನಿರ್ಮಾಣ ಬಳಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಬೇಡ ಎಂದು ಕೆಲವು ಪ್ರಗತಿಪರರು ವಿರೋಧ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿ ಮಾತನಾಡಲಾಗುವುದು. ನಂತರ ಇದರ ಬಗ್ಗೆ ತೀರ್ಮಾನ ಮಾಡುವುದಾತಿ ತಿಳಿಸಿದರು.
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರ ಕುರಿತು ಮಾತನಾಡಿದ ಅವರು, ಯಾರೂ ಕೂಡ ಬಲವಂತವಾಗಿ ಭೂಮಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.
ಭೂಸುಧಾರಣಾ ಕಾಯ್ದೆ ತಿದ್ದುಪಡಿ ತರುವುದು ಅಗತ್ಯ ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲದ ನಿಬಂಧನೆಗಳು ನಮ್ಮಲ್ಲಿ ಇದ್ದವು. ಆದ್ದರಿಂದ ಕಾಯ್ದೆಯನ್ನು ಸರಳೀಕರಣ ಮಾಡಬೇಕಿತ್ತು. ನಮ್ಮ ಬಳಿ ಇರುವ ಭೂಮಿಯನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ. ಹೀಗಾಗಿ ರೈತರಿಗೆ ತೊಂದರೆ ಆಗುತ್ತದೆ ಎಂಬುದೆಲ್ಲ ಸುಳ್ಳು ಎಂದು ಹೇಳಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಎಂಎಲ್‍ಸಿ ಟಿಕೆಟ್ ಸಿಗಲಿದೆ ಎಂದು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಈಗಾಗಲೇ ಎಂಎಲ್‍ಸಿ ಸ್ಥಾನದ ಪಟ್ಟಿಯಲ್ಲಿ ವಿಶ್ವನಾಥ್ ಹೆಸರು ಇದ್ದು, ಹೈಕಮಾಂಡ್‍ಗೆ ಕಳುಹಿಸಿಕೊಡಲಾಗಿದೆ. ಹೈಕಮಾಂಡ್ ಸಹ ವಿಶ್ವನಾಥ್ ಪರ ಒಲವು ಹೊಂದಿದೆ. ಆಗಾಗಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುತ್ತಾರೆ ಎಂದು ಭಾವಿಸಿರುವುದಾಗಿ ತಿಳಿಸಿದರು. ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದು ನಿಜ. ಆದರೆ ಎಲ್ಲವೂ ಅಂದುಕೊಂಡಂತೆ ಆಗಲಿದೆ ಎಂದು ಹೇಳಿದರು.







