ದ.ಕ.ಜಿಲ್ಲೆಯಲ್ಲಿ ಭತ್ತ ಕೃಷಿ ಚಟುವಟಿಕೆ ಆರಂಭ: 10,260 ಹೆಕ್ಟೇರ್ ಗುರಿ

ಮಂಗಳೂರು, ಜೂ.14: ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಬಿರುಸುಗೊಳ್ಳುತ್ತಿರುವ ಮಧ್ಯೆಯೇ ರೈತರ ಮುಖದಲ್ಲಿ ಮಂದಹಾಸ ಕಂಡುಬರುತ್ತಿವೆ. ಕೃಷಿ ಚಟುವಟಿಕೆಯೂ ಚುರುಕುಗೊಳ್ಳುತ್ತಿವೆ. ಭತ್ತ ಕೃಷಿಗಾಗಿ ಉಳುಮೆ, ಬೀಜ ಬಿತ್ತನೆ ಕೆಲಸಗಳು ಆರಂಭಗೊಂಡಿವೆ.
ಕಳೆದ ಮುಂಗಾರು ತಡವಾಗಿ ಆರಂಭವಾದ ಕಾರಣ ಕೃಷಿ ಚಟುವಟಿಕೆಗಳು ವಿಳಂಬವಾಗಿತ್ತು. ಆದರೆ ಈ ಬಾರಿ ನಿಗದಿತ ಅವಧಿಯಲ್ಲೇ ಮುಂಗಾರು ಕರಾವಳಿಗೆ ಆಗಮಿಸಿದ್ದರಿಂದ ಗ್ರಾಮಾಂತರ ಪ್ರದೇಶದ ಹಳ್ಳ, ಕೊಳ್ಳ, ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ರೈತರು ನಾಟಿಗಿಂತ ಬಿತ್ತನೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಉಳುಮೆ ಮಾಡಿ ಗದ್ದೆಗಳನ್ನು ಹದ ಮಾಡುವ ಕೆಲಸಗಳು ಭರದಿಂದ ನಡೆಯುತ್ತಿವೆ. ಚಾಪೆ ಮಾದರಿ ಯಲ್ಲಿ ನೇಜಿ ಮಾಡಿಟ್ಟುಕೊಂಡು ನಾಟಿ ಮಾಡಲು ರೈತರು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕೃಷಿ ಆರಂಭವಾಗಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಗದ್ದೆ ಉತ್ತು ನಾಟಿಗೆ ಸಿದ್ಧರಾಗಿದ್ದಾರೆ. ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ, ಬೀಜ, ರಸಗೊಬ್ಬರ ವಿತರಣೆ ಕಾರ್ಯವೂ ಭಾಗಶಃ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
10,260 ಹೆಕ್ಟೇರ್ ಗುರಿ
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದ.ಕ. ಜಿಲ್ಲೆಯಲ್ಲಿ 10,260 ಹೆಕ್ಟೇರ್ ಪ್ರದೇಶಲ್ಲಿ ಭತ್ತ ಬೆಳೆಯುವ ಗುರಿ ಇದೆ. 2019-20ನೇ ಸಾಲಿನಲ್ಲಿ 15,900 ಹೆಕ್ಟೇರ್ ಪ್ರದೇಶಲ್ಲಿ ಭತ್ತ ಬೆಳೆಯುವ ಗುರಿಯಲ್ಲಿ ಕೇವಲ 10,411 ಹೆಕ್ಟೇರ್ ಮಾತ್ರ ಬೆಳೆಯಾಗಿತ್ತು. ಜಿಲ್ಲೆಯಲ್ಲಿ ವರ್ಷ ದಿಂದ ವರ್ಷಕ್ಕೆ ಗದ್ದೆಗಳು, ಭತ್ತ ಬೆಳೆಯುವ ರೈತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ಬೀಜ-ರಸಗೊಬ್ಬರ ಪೂರೈಕೆ
ಶೇ.90ರಷ್ಟು ಬಿತ್ತನೆ ಬೀಜವನ್ನು ಈಗಾಗಲೇ ಜಿಲ್ಲೆಯ ರೈತರಿಗೆ ವಿತರಿಸಲಾಗಿದೆ. ಎಂಒ-4ಗೆ ರೈತರಿಂದ ಹೆಚ್ಚು ಬೇಡಿಕೆಯಿದ್ದು, ಉಳಿದಂತೆ ಜಯ, ಜ್ಯೋತಿ ತಳಿಯೂ ಲಭ್ಯವಿದೆ. ದ.ಕ ಜಿಲ್ಲೆಗೆ 600 ಕ್ವಿಂಟಾಲ್ ಬೀಜ ಬಂದಿದ್ದು, ಶೇ.95ರಷ್ಟು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ. ಅಲ್ಲದೆ 5 ಸಾವಿರ ಟನ್ ರಸಗೊಬ್ಬರ ದಾಸ್ತಾನಿದ್ದು, ರೈತರಿಗೆ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ.







