ಜಾನುವಾರು ವ್ಯಾಪಾರಿಯ ಮೇಲೆ ಹಲ್ಲೆಗೆ ಖಂಡನೆ
ಮಂಗಳೂರು, ಜೂ.14: ನಗರದ ಕೊಟ್ಟಾರದಲ್ಲಿ ಅಕ್ರಮ ಗೋ ಸಾಗಾಟದ ಆರೋಪದ ಮೇಲೆ ಚಾಲಕನನ್ನು ಟೆಂಪೋಗೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಹೇಯ ಕೃತ್ಯ ನಡೆಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮುಸ್ಲಿಂ ಜಸ್ಟಿಸ್ ಫೋರಂ: ಸಂಘ ಪರಿವಾರದ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿರುವ ಈ ಕೃತ್ಯ ಖಂಡನೀಯ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪೊಲೀಸ್ ಇಲಾಖೆ ನಿಷ್ಪಕ್ಷವಾಗಿ ತನಿಖೆ ನಡೆಸಬೇಕು. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುಸ್ಲಿಂ ಜಸ್ಟಿಸ್ ಫೋರಂನ ಅಧ್ಯಕ್ಷ ಡಾ.ಕೆ.ಎಸ್. ಅಮೀರ್ ತುಂಬೆ ಒತ್ತಾಯಿಸಿದ್ದಾರೆ.
ಮಾಂಸ ವ್ಯಾಪಾರಸ್ಥರ ಸಂಘ: ಕೊರೋನ-ಲಾಕ್‌ಡೌನ್ ಸಂಕಷ್ಟದ ಮಧ್ಯೆ ಜನರು ಜಾತಿ, ಮತ ಭೇದ ಮರೆತು ಮಾನವೀಯ ನೆಲೆಯಲ್ಲಿ ಒಗ್ಗೂಡಿ ಪರಸ್ಪರ ಸಹಕಾರದ ಬದುಕು ಸಾಗಿಸುವಾಗ ಜಾನುವಾರು ಸಾಗಾಟದ ನೆಪದ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮಾಂಸ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.
ಕಾನೂನು ಬದ್ಧವಾಗಿ ಜಾನುವಾರು ಸಾಗಾಟ ಮಾರಾಟ ಮಾಡುವವರನ್ನು ತಡೆದು ನಿಲ್ಲಿಸಿ ಮಾನಸಿಕವಾಗಿ ಹಿಂಸಿಸಿ, ದೈಹಿಕವಾಹಿ ದೌರ್ಜನ್ಯ ಎಸಗುವ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆಯು ಯಾವುದೇ ಪ್ರಕರಣ ದಾಖಲಿಸದೆ, ಜಾನುವಾರು ಸಾಗಾಟ ಮಾಡುವವರ ಮೇಲೆಯೇ ಪ್ರಕರಣ ದಾಖಲಿಸುವುದು ಯಾವ ನ್ಯಾಯ ಎಂಬುದರ ಬಗ್ಗೆ ಜಿಲ್ಲೆಯ ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್ ಮನವಿ ಮಾಡಿದ್ದಾರೆ.







