'ಇಎಂಐ ವಿಳಂಬ' ಎಂಬ ವೈರಲ್ ಸಂದೇಶದ ಬಗ್ಗೆ ಬಜಾಜ್ ಫೈನಾನ್ಸ್ ಸ್ಪಷ್ಟನೆ

ಬೆಂಗಳೂರು, ಜೂ.14: ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಕಂತು ವಿಳಂಬ ಸೌಲಭ್ಯ ಕುರಿತು ಕೆಲ ದುಷ್ಕರ್ಮಿಗಳು ಸುಳ್ಳು ಸುದ್ದಿ ಹರಿದುಬಿಡುತ್ತಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಎಂದು ಬಜಾಜ್ ಫೈನಾನ್ಸ್ ಮನವಿ ಮಾಡಿದೆ.
'ಆರ್ ಬಿಐ ನಿರ್ದೇಶನದಂತೆ ಕಂತು ವಿಳಂಬ ಸೌಲಭ್ಯ ಎಲ್ಲರಿಗೂ ಅನ್ವಯಿಸುತ್ತದೆ ಹಾಗೂ ಇದರ ಅನ್ವಯ ಇಎಂಐ ಕಟ್ಟಬೇಕಿಲ್ಲ ಹಾಗೂ ಬಡ್ಡಿ ಅನ್ವಯಿಸುವುದಿಲ್ಲ. ಬ್ಯಾಂಕ್‍ಗಳು ಇಎಂಐ ಮ್ಯಾಂಡೇಟ್ ಬೌನ್ಸ್ ಶುಲ್ಕ ವಿಧಿಸಿದಾಗ ಅದನ್ನು ಬಿಎಫ್‍ಎಲ್‍ಗೆ ಕ್ರೆಡಿಟ್ ಮಾಡಲಾಗುತ್ತದೆ. ಎಲ್ಲ ಗ್ರಾಹಕರ ಇಎಂಐ ಮ್ಯಾಂಡೇಟ್‍ಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂಬ ವದಂತಿ ಹರಡುತ್ತಿದ್ದಾರೆ' ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ವಾಸ್ತವವಾಗಿ ಎಲ್ಲ ಗ್ರಾಹಕರಿಗೆ ಸ್ವಯಂಚಾಲಿತ ಕಂತು ವಿಳಂಬ ಸೌಲಭ್ಯ ಒದಗಿಸಲು ಎನ್‍ಬಿಎಫ್‍ಸಿಗಳಿಗೆ ಅನುಮತಿ ನೀಡಿದೆ. ಆದರೆ ಇದು ಕಡ್ಡಾಯವಲ್ಲ. ಕಂತು ವಿಳಂಬ ಸೌಲಭ್ಯ ಪಡೆಯದ ಗ್ರಾಹಕರು ಇಎಂಐ ಪಾವತಿಸಬಹುದಾಗಿದೆ. ಅವಧಿ ಸಾಲ ಮತ್ತು ದುಡಿಯುವ ಬಂಡವಾಳಕ್ಕೆ ಸಂಬಂಧಿಸಿದಂತೆ ಕರಾರಿನ ಬಡ್ಡಿದರ ಅನ್ವಯಿಸುತ್ತದೆ. ಅವಧಿ ಸಾಲದ ಉಳಿದ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತದೆ. ದುಡಿಯುವ ಬಂಡವಾಳಕ್ಕೆ ಸಂಚಿತ ಬಡ್ಡಿಯನ್ನು ಕಂತು ವಿಳಂಬ ಅವಧಿ ಮುಗಿದ ಬಳಿಕ ವಸೂಲಿ ಮಾಡಲಾಗುತ್ತದೆ ಎಂದು ವಿವರಿಸಿದೆ.







