ಹಳಿತಪ್ಪಿರುವ ಬೀದರ್ ವೈದ್ಯಕೀಯ ಕಾಲೇಜಿನ ಆಡಳಿತ ಸರಿ ಹಾದಿಗೆ ತರುತ್ತೇನೆ: ಡಾ.ಕೆ.ಸುಧಾಕರ್

ಬೀದರ್, ಜೂ.14: ಹಳಿತಪ್ಪಿರುವ ಬೀದರ್ ವೈದ್ಯಕೀಯ ಕಾಲೇಜಿನ ಆಡಳಿತವನ್ನು ಮರಳಿ ಸರಿಹಾದಿಗೆ ತರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಬೀದರ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸಂಸ್ಥೆಯ ಆಡಳಿತ ಗೊಂದಲದ ಗೂಡಿನಂತಾಗಿದೆ. ಕಾಲೇಜು ಆರಂಭವಾಗಿ 13 ವರ್ಷಗಳಾದರೂ ಸರಿಯಾಗಿ ನಡೆಯುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ್ದು, ಕೆಲ ತಿಂಗಳಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಖಾಲಿಯಿರುವ 16 ಬೋಧಕ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡುವಂತೆ, ಅದಕ್ಕೆ ಅಧಿಸೂಚನೆ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಹದಿಮೂರು ವರ್ಷಗಳಾದರೂ ಸಂಸ್ಥೆಯ ಆಡಳಿತ ಹಳಿ ಮೇಲೆ ಬಂದಿಲ್ಲ. ಇನ್ನಾದರೂ ಈ ಪರಿಸ್ಥಿತಿ ಸರಿಯಾಗಬೇಕು ಎಂದರು.
ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ಮೆಡಿಕಲ್ ಕಾಲೇಜು ಸ್ಥಾಪಿಸಿದಾಗ ಉದ್ದೇಶವೇ ಈಡೇರದಿದ್ದಾಗ ಇಷ್ಟೆಲ್ಲಾ ಸೌಲಭ್ಯಗಳನ್ನು ಏಕೆ ಕೊಡಬೇಕಿತ್ತು? ಎಂದು ನಿರ್ದೇಶಕರನ್ನು ಅವರು ತರಾಟೆಗೆ ತೆಗೆದುಕೊಂಡರು. ಸಚಿವರು ಕೇಳಿದ ಮಾಹಿತಿ ನೀಡಲು ನಿರ್ದೇಶಕರು ವಿಫಲರಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ದಿನ ಸಭೆ ನಿಗದಿ ಮಾಡಿ ಪರಿಶೀಲಿಸುವುದಾಗಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.







