‘ದೇಶ ಒಡೆದವರು’ ಎಂದು ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದ ‘ಟ್ರೋಲ್ ಎಂಕು’
ದ್ವೇಷ ಹರಡುವ ಫೇಸ್ ಬುಕ್ ಪೇಜ್ ವಿರುದ್ಧ ಆಕ್ರೋಶ

ಮಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ಅವಮಾನಿಸಿ ಪೋಸ್ಟ್ ಹಾಕಿರುವ ಫೇಸ್ ಬುಕ್ ಪೇಜ್ ‘ಟ್ರೋಲ್ ಎಂಕು’ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಸದಾ ದ್ವೇಷ ಹರಡುತ್ತಿರುವ ಈ ಪೇಜ್ ಅಡ್ಮಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.
ಮೊದಲಿನಿಂದಲೂ ಈ ಪೇಜ್ ಸಮುದಾಯಗಳ ನಡುವೆ ದ್ವೇಷ ಬಿತ್ತುವಂತಹ ಹಲವು ಪೋಸ್ಟ್ ಗಳನ್ನು ಮಾಡಿ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಬಾರಿ ಇನ್ನೂ ಕೀಳುಮಟ್ಟಕ್ಕಿಳಿದು ರಾಷ್ಟ್ರಪಿತ ಗಾಂಧೀಜಿಯವರನ್ನು ಅವಮಾನಿಸಿದೆ.
ಜೂನ್ 11ರಂದು ಈ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾದ ಪೋಸ್ಟ್ ನಲ್ಲಿ “ಹುಡುಗಿಯರು ಫೋನ್ ಒಡೆದ ನಂತರ” ಎಂದು ಬರೆದು ನಟಿಯೊಬ್ಬರು ಅಳುತ್ತಿರುವ ಮತ್ತು “ಹುಡುಗರು ದೇಶವನ್ನು ಒಡೆದ ನಂತರ’ ಎಂದು ಬರೆದು ಮಹಾತ್ಮಾ ಗಾಂಧೀಜಿಯವರು ನಗುತ್ತಿರುವ ಫೋಟೊವನ್ನು ಎಡಿಟ್ ಮಾಡಲಾಗಿದೆ.
ಈ ಪೋಸ್ಟ್ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಕೆಲ ದುಷ್ಕರ್ಮಿಗಳು ಈ ಪೋಸ್ಟನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಇಂತಹ ಹಲವು ಪೇಜ್ ಗಳು ದ್ವೇಷ ಹರಡುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬಂದಿದೆ.





