ಜಮೀನು ವಿಚಾರದಲ್ಲಿ ಕಲಹ: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಶಿವಮೊಗ್ಗ, ಜೂ.14: ಜಮೀನು ವಿಚಾರವಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ವಿಜ್ಞಾನಿ, ಇಂಜಿನಿಯರ್ ಮತ್ತು ಟೀಚರ್ ವಿರುದ್ಧ ಕೇಸ್ ದಾಖಲಾಗಿದೆ.
ಶಿಕಾರಿಪುರ ತಾಲೂಕು ಕಾಗಿನೆಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸುಶೀಲಮ್ಮ(43) ವಿಷ ಸೇವಿಸಿ ಮೃತರಾಗಿದ್ದಾರೆ. ಸುಶೀಲಮ್ಮ ಅವರು ಶನಿವಾರ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಶೀಲಮ್ಮ ಮೃತರಾಗಿದ್ದಾರೆ.
ಜಮೀನು ವಿಚಾರವಾಗಿ ಸುಶೀಲಮ್ಮ ಅವರ ಪತಿ ಚಂದ್ರಪ್ಪ ಮತ್ತು ಮೈದುನರ ನಡುವೆ ಜಗಳವಾಗುತ್ತಿತ್ತು. ಶನಿವಾರವೂ ಮೈದುನರು ಬಂದು ಚಂದ್ರಪ್ಪ ಮತ್ತು ಸುಶೀಲಮ್ಮ ಅವರೊಂದಿಗೆ ಜಗಳವಾಡಿದ್ದರು. ನಿಮ್ಮ ಕಿರುಕುಳದಿಂದ ಬೇಸತ್ತು ವಿಷ ಸೇವಿಸುವುದಾಗಿ ಸುಶೀಲಮ್ಮ ಬೆದರಿಸಿದ್ದರು. ಈ ವೇಳೆ ವಿಷ ಕುಡಿಯುವಂತೆ ಮೈದುನರು ಪ್ರಚೋದನೆ ನೀಡಿದ್ದಾರೆ. ಹಾಗಾಗಿ ಸುಶೀಲಮ್ಮ ವಿಷ ಸೇವಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ವಿಜ್ಞಾನಿ, ಇಂಜಿನಿಯರ್, ಟೀಚರ್ ವಿರುದ್ಧ ಕೇಸ್
ಆತ್ಮಹತ್ಯೆ ಪ್ರಚೋದನೆ ನೀಡಿದ ಸಂಬಂಧ ಸುಶೀಲಮ್ಮ ಅವರ ಮೂವರು ಮೈದುನರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ ಒಬ್ಬ ಮೈದುನ ವಿಜ್ಞಾನಿ, ಮತ್ತೊಬ್ಬರು ಇಂಜಿನಿಯರ್, ಇನ್ನೊಬ್ಬರು ಟೀಚರ್. ಇವರ ವಿರುದ್ಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







