ಏಳು ತಳಿ ಮಾವು ಖರೀದಿಗೆ ಮಾವು ಅಭಿವೃದ್ಧಿ ಮಂಡಳಿ ಅವಕಾಶ
ಬೆಂಗಳೂರು, ಜೂ.14: ಮಾವು ಅಭಿವೃದ್ಧಿ ಮಂಡಳಿ ಈಗ ಆನ್‍ಲೈನ್ ಮೂಲಕ ಹೆಚ್ಚುವರಿಯಾಗಿ ಏಳು ತಳಿಯ ಮಾವು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
ಅಂಚೆ ಇಲಾಖೆ ಸಹಭಾಗಿತ್ವದಿಂದ ಮನೆ ಬಾಗಿಲಿಗೆ ಮಾವು ತರಿಸುತ್ತಿದ್ದ ಗ್ರಾಹಕರು ಈಗ ಬಾದಾಮಿ, ಮಲ್ಲಿಕಾ, ರಸಪೂರಿ ಮಾವಿನ ಜೊತೆಗೆ ಹೆಚ್ಚುವರಿಯಾಗಿ ನೀಲಂ, ಸಕ್ಕರೆಗುತ್ತಿ, ಸಿರಿ, ದಸೇರಿ, ಕೇಸರ್, ಅಮ್ರಪಾಲಿ, ಬಂಗನಪಲ್ಲಿ ಮಾವು ತಳಿಗಳನ್ನು ಖರೀದಿಸಬಹುದಾಗಿದೆ.
ಮೂರನೇ ಬಾರಿಗೆ ಪರಿಚಯಿಸಿದ್ದ ಆನ್‍ಲೈನ್ ಮಾವು ಮಾರಾಟಕ್ಕೆ ಉತ್ತಮ ಪ್ರತ್ರಿಕ್ರಿಯೆ ಬರುತ್ತಿದೆ. ಅಲ್ಲದೆ, ಹೆಚ್ಚು ತಳಿಗಳನ್ನು ಸೇರಿಸುವಂತೆ ಹಲವು ಗ್ರಾಹಕರು ಮಾವು ಅಭಿವೃದ್ಧಿ ಮಂಡಳಿಗೆ ಕರೆ ಮಾಡಿ ಮನವಿ ಮಾಡುತ್ತಿದ್ದರು. ಆದ್ದರಿಂದ ಹೊಸದಾಗಿ ವಿವಿಧ ಏಳು ತಳಿಗಳನ್ನು ಸೇರಿಸಲಾಗಿದೆ ಎನ್ನುತ್ತಾರೆ ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜಿ.ನಾಗರಾಜ್.
3 ಸಾವಿರ ಟನ್ ಮಾರಾಟ: ಮಾವು ಅಭಿವೃದ್ಧಿ ಮಂಡಳಿಯಿಂದ ಪರಿಚಯಿಸಿರುವ ವೆಬ್ ಪೋರ್ಟಲ್‍ನಲ್ಲಿ ಈವರೆಗೂ ಮೂರು ಸಾವಿರ ಟನ್‍ಗೂ ಹೆಚ್ಚು ಮಾವಿನ ಹಣ್ಣ ಮಾರಾಟವಾಗಿದೆ. ಇನ್ನೂ ಎರಡು ಸಾವಿರ ಟನ್ ಮಾರಾಟವಾಗುವ ಸಾಧ್ಯತೆಯಿದೆ. ಕೊರೋನ ಭಯದಿಂದ ಕೆಲವರು ಮಾವು ತಿನ್ನುವುದಕ್ಕೂ ಹಿಂಜರಿದಿದ್ದರು. ಈ ಬಗ್ಗೆ ಜಾಗೃತಿ ಮೂಡಿಸಿದ ಬಳಿಕ ಉತ್ತಮ ಮಾರಾಟ ಹೆಚ್ಚಾಗಿದೆ ಎಂದರು.
ನಿರೀಕ್ಷಿತ ಲಾಭ ಇಲ್ಲ
ಕೊರೋನ ವೈರಸ್ ಸೋಂಕು ಇರುವುದರಿಂದ ಮಾವು ಬೆಳೆಗಾರರಿಗೆ ನಿರೀಕ್ಷಿತ ವ್ಯವಹಾರ ನಡೆದಿಲ್ಲ. ರಾಮನಗರ ಮತ್ತು ಮಂಡ್ಯ ಭಾಗಗಳ ರೈತರಿಗೆ ಲಾಭದ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಮಾವು ಮಾರುಕಟ್ಟೆಗೆ ಬರುವ ವೇಳೆ ಲಾಕ್‍ಡೌನ್ ಸಡಿಲಿಕೆ ಆಗಿರುವುದರಿಂದ ಕೊಂಚ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ.
-ಡಾ.ಸಿ.ಜಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ, ಮಾವು ಅಭಿವೃದ್ಧಿ ಮಂಡಳಿ







