ಬಡವರ ಬಂಧು ಯೋಜನೆ ಬಲವರ್ಧನೆಗೆ ಸರಕಾರ ಚಿಂತನೆ

ಬೆಂಗಳೂರು, ಜೂ.14: ಬೀದಿ ಬದಿ ವ್ಯಾಪಾರಿಗಳನ್ನು ದುಬಾರಿ ಬಡಿ ಸಂಕಷ್ಟದಿಂದ ಪಾರು ಮಾಡಲು ಶೂನ್ಯ ಬಡ್ಡಿದರದ ಸಾಲ ನೀಡುವ 'ಬಡವರ ಬಂಧು' ಯೋಜನೆ ಬಲವರ್ಧನೆಗೆ ಸರಕಾರ ಗಂಭೀರವಾದ ಚಿಂತನೆ ನಡೆಸಿದ್ದು, ಇದಕ್ಕೆ ಪೂರಕವಾಗಿ ಜಿಲ್ಲಾಮಟ್ಟದಲ್ಲಿ ಪರಿಷ್ಕೃತ ಸಮಿತಿ ರಚಿಸಲಾಗಿದೆ.
ಡಿಸಿಸಿ ಬ್ಯಾಂಕ್‍ಗಳ ಅಧ್ಯಕ್ಷರ ಬದಲಾಗಿ ಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನ ಮಾಡಲು ಅನುಕೂಲವಾಗುವಂತೆ ಪರಿಷ್ಕೃತ ಸಮಿತಿ ರಚಿಸಲಾಗಿದೆ ಎಂದು ಸಹಕಾರ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ದೈನಂದಿನ ವ್ಯಾಪಾರಕ್ಕಾಗಿ ಸಕಾಲಕ್ಕೆ ಕೈ ಸಾಲ ಹಂಚಿಕೆ ಪ್ರಕ್ರಿಯೆ ಸರಾಗವಾಗಿಸುವುದು ಮುಖ್ಯವಾಗಿದ್ದು, ಇದಕ್ಕೆಂದೇ ಸ್ಥಳೀಯ ನಗರ-ಪಟ್ಟಣ ಸಂಸ್ಥೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರತಿನಿಧಿಗೆ ಅವಕಾಶ ಕಲ್ಪಿಸಲಾಗಿದೆ.
ನಿಜವಾಗಿಯೂ ವ್ಯಾಪಾರ ಮಾಡುವವರಿಗೆ ಸಾಲ ಸಕಾಲಕ್ಕೆ ದೊರೆಯಬೇಕು. ಕಾಲಮಿತಿಯೊಳಗೆ ಸಾಲದ ಕಂತು ಮರು ಪಾವತಿಸಿ ಫಲಾನುಭವಿಗಳ ಸಂಖ್ಯೆ ವಿಸ್ತರಿಸಲು ಸಾಧ್ಯವಾಗುತ್ತದೆ. ಸಾಲ ನೀಡುವ ಸಂಘಗಳು ವಹಿವಾಟು ವೃದ್ಧಿ ಹಾಗೂ ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆ, ಜೀವನಮಟ್ಟ ಸುಧಾರಣೆಯಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.







