ಬೆಳ್ತಂಗಡಿ : ತಂದೆಯನ್ನು ಕತ್ತಿಯಿಂದ ಕಡಿದು ಕೊಂದ ಮಕ್ಕಳು
ಬೆಳ್ತಂಗಡಿ : ಕ್ಷುಲ್ಲಕ ಕಾರಣಕ್ಕೆ ಮಕ್ಕಳಿಬ್ಬರು ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.
ಇಲ್ಲಿನ ಧರ್ನಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿ. ಇವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬವರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆನ್ನಲಾಗಿದ್ದು, ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಧರ್ನಪ್ಪ ಪೂಜಾರಿಯವರು ಮನೆಯಲ್ಲಿದ್ದ ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಇದೇ ವಿಚಾರಕ್ಕೆ ಮಕ್ಕಳಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ರವಿವಾರ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ ಮಕ್ಕಳೊಳಗೆ ಜಗಳವಾಗಿದ್ದು, ಈ ಸಂದರ್ಭ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದು, ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಠಾಣೆ ಪೊಲೀಸರು ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.