ಮಹಿಳೆಯ ಖಾಸಗಿ ಫೋಟೋ ಹರಿಬಿಟ್ಟ ಆರೋಪ: ಸರಕಾರಿ ನೌಕರನ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜೂ.15: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅವಿವಾಹಿತ ಸರಕಾರಿ ನೌಕರನೊಬ್ಬ ಮಹಿಳೆಯ ಖಾಸಗಿ ಕ್ಷಣದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯು ಲಾಕ್ಡೌನ್ ಸಂದರ್ಭದಲ್ಲಿ ಭೇಟಿಯಾಗದ ಕಾರಣಕ್ಕೆ ಆಕ್ರೋಶಗೊಂಡ ನೌಕರ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ನಲ್ಲಿ ಹರಿಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಕೆಆರ್ ಪುರಂ ನಿವಾಸಿ ಆಗಿರುವ 36 ವರ್ಷದ ಮಹಿಳೆಯ ಪತಿ ವಿಕಲಚೇತನರಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 8 ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ 27 ವರ್ಷದ ಅವಿವಾಹಿತ ಸರಕಾರಿ ನೌಕರನ ಪರಿಚಯವಾಗಿ ಸಲುಗೆ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿದೆ ಎನ್ನಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಭೇಟಿಯಾಗುವಂತೆ ಪೀಡಿಸಿದ್ದಾನೆ. ಇಲ್ಲದಿದ್ದರೆ, ಖಾಸಗಿ ಕ್ಷಣಗಳ ಫೋಟೋ ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಈ ಸಂಬಂಧ ಕೆಆರ್ ಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.