ಚಿಕ್ಕಮಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗೆ ಕೊರೋನ ಎಂದ ಪ್ರಯೋಗಾಲಯ ವರದಿಯಲ್ಲಿ ಎಡವಟ್ಟು ?

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಜೂ.15: ಇತ್ತೀಚೆಗೆ ಕೊರೋನ ಪಾಸಿಟಿವ್ ಎನ್ನಲಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿಯ ಪ್ರಯೋಗಾಲಯದ ವರದಿಯಲ್ಲಿ ಎಡವಟ್ಟಾಗಿದೆಯೇ? ಎಂಬ ಪ್ರಶ್ನೆ ಇದೀಗ ಜಿಲ್ಲೆಯ ಜನರನ್ನು ಕಾಡಲಾರಂಭಿಸಿದ್ದು, ಪಾಸಿಟಿವ್ ಎನ್ನಲಾಗಿದ್ದ ವಿದ್ಯಾರ್ಥಿಯಲ್ಲಿ ಇದುವರೆಗೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಹಾಗೂ ವಿದ್ಯಾರ್ಥಿಗೆ ವೈದ್ಯರು ಚಿಕಿತ್ಸೆ ಆರಂಭಿಸಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕಡೂರು ತಾಲೂಕಿನ ಕೆ.ದಾಸರಹಳ್ಳಿ ಗ್ರಾಮದ ನಿವಾಸಿಯಾಗಿರುವ ಎಸೆಸೆಲ್ಸಿ ವಿದ್ಯಾರ್ಥಿಯಲ್ಲಿ ಕೊರೋನ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ನಗರದ ಕೊರೋನ ಚಿಕಿತ್ಸಾ ಘಟಕದಲ್ಲಿ ದಾಖಲಿಸಿ, ವಿದ್ಯಾರ್ಥಿಯ ಸ್ವಂತ ಊರು ಕೆ.ದಾಸರಹಳ್ಳಿಯಲ್ಲಿ ಕಂಟೈನ್ಮೆಂಟ್ ಝೋನ್ ಗುರುತಿಸಿ ಸೀಲ್ಡೌನ್ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಯನ್ನು ಕೊರೋನ ಚಿಕಿತ್ಸಾ ಘಟಕಕ್ಕೆ ದಾಖಲಿಸಿ ವಾರ ಕಳೆದಿದ್ದರೂ ವೈದ್ಯರು ವಿದ್ಯಾರ್ಥಿಗೆ ಚಿಕಿತ್ಸೆ ಆರಂಭಿಸಿಲ್ಲ ಎಂದು ತಿಳಿದುಬಂದಿದೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಎಸೆಸೆಲ್ಸಿ ವಿದ್ಯಾರ್ಥಿಯಲ್ಲಿ ಕೊರೋನ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿತ್ತು. ಆದರೆ ವಿದ್ಯಾರ್ಥಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಮತ್ತೆ ಆತನ ರಕ್ತ, ಗಂಟಲ ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿದೆ. ಆತನ ಪ್ರಾಥಮಿಕ ಸಂಪರ್ಕಗಳನ್ನೂ ಪರೀಕ್ಷೆಗೊಳಪಡಿಸಿದಾಗಲೂ ಎಲ್ಲ ವರದಿಗಳೂ ನೆಗೆಟಿವ್ ಬಂದಿದೆ. ಆದ್ದರಿಂದ ವಿದ್ಯಾರ್ಥಿಯಿಂದ ಮೊದಲು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ ರಕ್ತ, ಗಂಟಲ ದ್ರವದ ಮಾದರಿಯನ್ನು ಮತ್ತೆ ಮರುಪರೀಕ್ಷೆ ಮಾಡಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ವಾಸ್ತವಾಂಶ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 3,900 ಜನರ ರಕ್ತ, ಗಂಟಲ ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ಒಂದೆರೆಡೆ ವರದಿಗಳು ತಪ್ಪಾಗಿ ಬಂದಿರುವ ಸಾಧ್ಯತೆ ಇದೆ. ಎಸೆಸೆಲ್ಸಿ ವಿದ್ಯಾರ್ಥಿಯ ಪ್ರಯೋಗಾಲಯದ ವರದಿ ಪಾಲ್ಸ್ ಪಾಸಿಟಿವ್ ಆಗಿದ್ದಲ್ಲಿ ಅದು ಜಿಲ್ಲೆಗೆ ಜಿಲ್ಲೆಗೆ ಒಳ್ಳೆಯ ಸುದ್ದಿಯಾಗಿದೆ. ಜಿಲ್ಲೆಯಲ್ಲಿ ಲ್ಯಾಬ್ ಇಲ್ಲ. ಶಿವಮೊಗ್ಗ, ಬೆಂಗಳೂರು, ಹಾಸನಕ್ಕೆ ಇಲ್ಲಿಯವರ ಮಾದರಿಗಳನ್ನು ಪರೀಕ್ಷೆ ಕಳುಹಿಸುತ್ತಿದ್ದೇವೆ. ಲ್ಯಾಬ್ನಲ್ಲಾಗಿರುವ ತಾಂತ್ರಿಕ ಇಲ್ಲವೇ ಮ್ಯಾನುಯಲ್ ಲೋಪಗಳಿಂದಾಗಿ ಪಾಸಿಟಿವ್ ಎಂದು ದಾಖಲಾಗಿರಬಹುದು. ವಿದ್ಯಾರ್ಥಿಯ ಮಾದರಿಯನ್ನು ಮರು ಪರೀಕ್ಷೆಗೆ ಕಳುಹಿಸಲಾಗಿದ್ದು, ಸೋಮವಾರ ಸಂಜೆ ಇಲ್ಲವೇ ಮಂಗಳವಾರದ ಒಳಗೆ ವಾಸ್ತವಾಂಶ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.
ಚಿಕ್ಕಮಗಳೂರು ಕೊರೋನ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಯ ಸಂಬಂಧಿಕರ ನಡುವೆ ನಡೆದಿದೆ ಎನ್ನಲಾದ ಮೊಬೈಲ್ ಕರೆಯ ಸಂಭಾಷಣೆಯಲ್ಲಿ ವಿದ್ಯಾರ್ಥಿಯ ಸಂಬಂಧಿಗಳು ವಿದ್ಯಾರ್ಥಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ವಿಚಾರಿಸಿದ್ದು, ಚಿಕಿತ್ಸೆಯನ್ನು ಇನ್ನೂ ಆರಂಭಿಸದಿರುವ ಬಗ್ಗೆ ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ಆರೋಗ್ಯ ಸ್ಥಿರವಾಗಿದ್ದು, ಸೋಂಕಿನ ಲಕ್ಷಣಗಳಿಲ್ಲದೇ ಚಿಕಿತ್ಸೆ ನೀಡುವಂತಿಲ್ಲ ಎಂದು ಸಿಬ್ಬಂದಿ ವಿದ್ಯಾರ್ಥಿ ಸಂಬಂಧಿಕರಿಗೆ ಹೇಳಿರುವುದು ಸಂಭಾಷಣೆಯಿಂದ ತಿಳಿದು ಬಂದಿದೆ. ಅಲ್ಲದೇ ವಿದ್ಯಾರ್ಥಿಯನ್ನು ಈಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರೆ ಸಾರ್ವಜನಿಕರು ತಪ್ಪು ಭಾವಿಸುತ್ತಾರೆ. ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿರುವುದೂ ಸಂಭಾಷಣೆಯಿಂದ ತಿಳಿದುಬಂದಿದೆ.
ಇನ್ನು ವಿದ್ಯಾರ್ಥಿಯ ಪ್ರಾಥಮಿಕ ಸಂಪರ್ಕಗಳಾದ ಸುಮಾರು 55 ಮಂದಿಯನ್ನು ಜಿಲ್ಲಾಡಳಿತ ಈಗಾಗಲೇ ಕ್ವಾರಂಟೈನ್ಗೆ ಒಳಪಡಿಸಿದ್ದು, ಈ ಸಂಪರ್ಕದಲ್ಲಿದ್ದವರ ಪೈಕಿ ಕೆಲವರು ಎಸೆಸೆಲ್ಸಿ ವಿದ್ಯಾರ್ಥಿಗಳೂ ಇದ್ದಾರೆ. ಈ ಎಲ್ಲ ಸಂಪರ್ಕಗಳೂ ಸೇರಿದಂತೆ ವಿದ್ಯಾರ್ಥಿಯ ತಂದೆ-ತಾಯಿಯನ್ನೂ ಜಿಲ್ಲಾಡಳಿತ ಪ್ರಯೋಗಾಲದ ಪರೀಕ್ಷೆಗೊಳಪಡಿಸಿದ್ದು, ಎಲ್ಲರ ವರದಿಗಳೂ ನೆಗೆಟಿವ್ ಬಂದಿದೆ.
ಜಿಲ್ಲೆಯಲ್ಲಿ ಈ ಹಿಂದೆ ಕೊರೋನ ಪಾಸಿಟಿವ್ ಎನ್ನಲಾದ ಎರಡು ಪ್ರಕರಣಗಳು ಪಾಲ್ಸ್ ಪಾಸಿಟಿವ್ ಎಂದು ಜಿಲ್ಲಾಡಳಿತ ಈಗಾಗಲೇ ಜಿಲ್ಲಾಡಳಿತ ಹೇಳಿಕೆ ನೀಡಿದ್ದು, ಮೂಡಿಗೆರೆ ತಾಲೂಕಿನ ಸರಕಾರಿ ವೈದ್ಯರು ಹಾಗೂ ತರೀಕೆರೆ ತಾಲೂಕಿನ ಗರ್ಭಿಣಿ ಮಹಿಳೆಯ ಪ್ರಯೋಗಾಲಯದ ವರದಿಗಳು ಮೊದಲು ಪಾಸಿಟಿವ್ ಎಂದು ಜಿಲ್ಲಾಡಳಿತ ತಿಳಿಸಿತ್ತು. ಬಳಿಕ ಈ ಎರಡೂ ಪಾಸಿಟಿವ್ ಪ್ರಕರಣಗಳು ಪಾಲ್ಸ್ ಪಾಸಿಟಿವ್ ಆಗಿವೆ. ಪ್ರಯೋಗಾಲಯದಲ್ಲಾದ ಎಡವಟ್ಟಿನಿಂದಾಗಿ ಈ ಇಬ್ಬರ ವರದಿಗಳು ಪಾಸಿಟಿವ್ ಎಂದು ದಾಖಲಾಗಿತ್ತು ಎಂದು ಹೇಳಿಕೆ ನೀಡಿದ್ದ ಜಿಲ್ಲಾಡಳಿತ ಇಬ್ಬರನ್ನೂ ಈ ಹಿಂದೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊರೋನ ಪಾಸಿಟಿವ್ ಎಂದು ದಾಖಲಾಗಿರುವ ಕಡೂರು ತಾಲೂಕಿನ ಕೆ.ದಾಸರಹಳ್ಳಿ ಗ್ರಾಮದ ಎಸೆಸೆಲ್ಸಿ ವಿದ್ಯಾರ್ಥಿಯ ವರದಿಯೂ ಪಾಲ್ಸ್ ಪಾಸಿಟಿವ್ ಇರಬಹುದೆಂಬ ಗೊಂದಲ ಜಿಲ್ಲೆಯ ಜನರಲ್ಲಿ ಮೂಡಿದೆ.







