ಪಿಂಚಣಿಗಾಗಿ ಶತಾಯುಷಿ ತಾಯಿಯನ್ನು ಮಂಚದಲ್ಲಿ ಮಲಗಿಸಿ ಬ್ಯಾಂಕ್ಗೆ ಎಳೆದೊಯ್ದ ವೃದ್ಧ ಪುತ್ರಿ !
ಸಾಂದರ್ಭಿಕ ಚಿತ್ರ
ಭುವನೇಶ್ವರ, ಜೂ.16: ಎಪ್ಪತ್ತು ವರ್ಷ ವಯಸ್ಸಿನ ವೃದ್ಧೆಯೊಬ್ಬರು 1,500 ರೂ. ಪಿಂಚಣಿ ಹಣವನ್ನು ಪಡೆಯುವುದಕ್ಕಾಗಿ, ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತನ್ನ 100 ವರ್ಷ ವಯಸ್ಸಿನ ತನ್ನ ತಾಯಿಯನ್ನು ಮಂಚದಲ್ಲಿ ಮಲಗಿಸಿ, ಎಳೆದುಕೊಂಡು ಬಂದ ಆಘಾತಕಾರಿ ಘಟನೆ ಒಡಿಶಾ ನುವಾಪಾಡ ಜಿಲ್ಲೆಯಲ್ಲಿ ನಡೆದಿದೆ.
ಬ್ಯಾಂಕ್ಗೆ ಮಹಿಳೆಯೊಬ್ಬರು ತನ್ನ ತಾಯಿಯನ್ನು ಮಂಚದಲ್ಲಿ ಮಲಗಿಸಿ, ಅದನ್ನು ಎಳೆದುಕೊಂಡು ಬರುತ್ತಿರುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಶತಾಯುಷಿ ಮಹಿಳೆಗೆ ಜನಧನ್ ಯೋಜನೆಯಡಿ ಪಿಂಚಣಿ ಹಣ ಲಭಿಸಿತ್ತು. ಆದರೆ ಆಕೆ ಜೀವಂತವಿದ್ದಾರೆಯೇ ಎಂಬುದನ್ನು ದೃಢಪಡಿಸಲು ಆಕೆಯನ್ನು ಬ್ಯಾಂಕ್ಗೆ ಹಾಜರುಪಡಿಸಬೇಕೆಂದು ಬ್ಯಾಂಕ್ ಅಧಿಕಾರಿಗಳು ಅವರ 70 ವರ್ಷದ ಪುತ್ರಿಗೆ ಸೂಚಿಸಿದ್ದರು. ಹೀಗಾಗಿ ಮಹಿಳೆಯು ಬೇರೆ ದಾರಿಯಿಲ್ಲದೆ ಅನಾರೋಗ್ಯ ಪೀಡಿತಳಾದ ತನ್ನ ತಾಯಿಯನ್ನು ಮಂಚದಲ್ಲಿ ಮಲಗಿಸಿಕೊಂಡು ಬ್ಯಾಂಕ್ಗೆ ತರಬೇಕಾಯಿತು. ಈ ಘಟನೆಯು ಜೂನ್ 9ರಂದು ನಡೆದಿದೆ.
‘‘ಕಳೆದ ಮೂರು ತಿಂಗಳುಗಳಲ್ಲಿ ನಾನು ಹಲವು ಸಲ ಬ್ಯಾಂಕ್ಗೆ ಭೇಟಿ ನೀಡಿದ್ದೆ. ತನ್ನ ತಾಯಿಯ ಪಿಂಚಣಿ ಹಣವನ್ನು ಬಿಡುಗಡೆಗೊಳಿಸುವಂತೆ ಬ್ಯಾಂಕ್ ಅಧಿಕಾರಿಗಳನ್ನು ಕೋರಿಕೊಂಡಿದ್ದೆ. ತಾಯಿಯನ್ನು ಬ್ಯಾಂಕ್ಗೆ ಕರೆತಂದಲ್ಲಿ ಮಾತ್ರವೇ ಪಿಂಚಣಿ ಹಣವನ್ನು ಬಿಡುಗಡೆಗೊಳಿಸುವುದಾಗಿ ಮ್ಯಾನೇಜರ್ ಅಜಿತ್ ಪ್ರಧಾನ್ ತಿಳಿಸಿದ್ದರು ’’ ಎಂದು 70 ವರ್ಷದ ಪುಂಜಿಮಾತಿ ದೇವಿ ತಿಳಿಸಿದ್ದಾರೆ.
ಪುಂಜಿಮಾತಿ ದೇವಿಯ ತಾಯಿ ಕೇಂದ್ರ ಸರಕಾರದ ಜನಧನ ಯೋಜನೆಯ ಖಾತೆದಾರರಾಗಿದ್ದರು. ಕೋವಿಡ್-19 ಬಿಕ್ಕಟ್ಟ ಹಿನ್ನೆಲೆಯಲ್ಲಿ ಎಪ್ರಿಲ್ನಿಂದ ಜೂನ್ವರೆಗೆ ಮಹಿಳೆಯರ ಜನಧನ ಬ್ಯಾಂಕ್ ಖಾತೆಗೆ ಮಾಸಿಕವಾಗಿ 500 ರೂ.ಗಳ ನೆರವನ್ನು ಕೇಂದ್ರ ಸರಕಾರವು ಘೋಷಿಸಿತ್ತು.